

ಮೈಸೂರು: ಮಹಾಕವಿ ಕಾಳಿದಾಸ ಹಾಗೂ ವಿಲಿಯಂ ಶೆಕ್ಸ್‌ಪೀಯರ್ ಸಾಹಿತ್ಯ ಬಿಟ್ಟರೆ ಬಸವಣ್ಣನ ವಚನಗಳನ್ನು ಹೆಚ್ಚು ಅನುವಾದ ಮಾಡಲಾಗಿದೆ ಎಂದು ಸಾಹಿತಿ ಪ್ರೊ.ಸಿ.ನಾಗಣ್ಣ ಹೇಳಿದರು.
ನಗರದ ಸರಸ್ವತಿಪುರಂನ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಪ್ರೊ.ಕೆ.ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್, ಹನ್ಯಾಳು ಪ್ರಕಾಶನ, ಸಂವಹನ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಆಲಕೆರೆ ಜೆ.ರಾಮಲಿಂಗೇಗೌಡ ಅವರ ಅನುವಾದ ಕೃತಿಗಳಾದ ‘ 108 ಪರ್ಲ್ಸ್ ಆಫ್ ವಿಸ್ಡಮ್( ಭಕ್ತಿ ಭಂಡಾರಿ ಬಸವಣ್ಣನವರ ಆಯ್ದ ವಚನಗಳ ಅನುವಾದ)’ ಮತ್ತು ‘ ಅಬಬಿಲ್-ಎ ಪ್ಲೋಕ್ ಆಫ್ ಟಿನಿ ಬರ್ಡ್ಸ್ ಕರೀಮ (ಮೂಲ ತೆಲುಗಿನ 100 ವಚನಗಳ ಅನುವಾದ)’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಾಳಿದಾಸ ಹಾಗೂ ಶೆಕ್ಸ್‌ಪೀಯರ್ ಅವರ ಕೃತಿಗಳು ಜಗತ್ತಿನ ಹಲವಾರು ಭಾಷೆಗಳಿಗೆ ಹಲವಾರು ಸಲ ಅನುವಾದಗೊಂಡಿವೆ. ಹಾಗೇ ಬಸವಣ್ಣ ವಚನಗಳೂ ಕೂಡ ಒಂದೇ ಭಾಷೆಯಲ್ಲಿ ಅನೇಕ ಸಲ ಅನುವಾದಗೊಂಡು ಪ್ರಕಟವಾಗಿವೆ. ಬಸವಣ್ಣ ಅನುವಾದವನ್ನು ಎರಡೂ ಕೈಗಳಿಂದ ಅಲಂಗಿಸಿಕೊಳ್ಳುತ್ತಾರೆ. ಅಷ್ಟೂ ವಿಸ್ತಾರ ಅವರ ವಚನಗಳಿಗೆ ಇದೆ. ಎಷ್ಟೇ ಸಲ ಅನುವಾದ ಮಾಡಿದರು ಅದರ ಸಾರವೇನು ಕಡಿಮೆಯಾಗುವುದಿಲ್ಲ. ಅದರ ಆಕರ್ಷಣೆ ಕಡಿಮೆಯಾಗುವುದಿಲ್ಲ ಎಂದು ವಿಶ್ಲೇಷಣೆ ಮಾಡಿದರು.