ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ

27.pyp.001
ಪಿರಿಯಾಪಟ್ಟಣದಲ್ಲಿ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.
Published on

ಪಿರಿಯಾಪಟ್ಟಣ: ಪಟ್ಟಣದ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ದೀಪಾವಳಿ ಪ್ರಯುಕ್ತ ಆಯೋಜಿಸಿದ್ದ 4 ದಿನಗಳ ಜಾತ್ರಾ ಮಹೋತ್ಸವದಲ್ಲಿ ಜನಸಂದಣಿ ಇತ್ತು.

ನರಕ ಚತುರ್ದಶಿ ದಿನವಾದ ಸೋಮವಾರ ಪಟ್ಟಣದ ಮಹದೇಶ್ವರಸ್ವಾಮಿ ಮಠದಿಂದ ದೇವರ ಉತ್ಸವ ಮೂರ್ತಿಯನ್ನು ದೇವಾಲಯದ ಉದ್ಭವ ಸ್ಥಾನಕ್ಕೆ ಕೊಂಡೊಯ್ದು ಎಣ್ಣೆ ಮಜ್ಜನ ನಡೆಸಲಾಯಿತು. ಪಟ್ಟಣದ ಬಸವನಗುಡಿಯಲ್ಲಿ ನಂದಿಧ್ವಜ, ದೇವರ ಛತ್ರಿಚಾಮರಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಕ್ಕಳು ಹಾಲರವಿ ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಸ್ವಾಮಿಗೆ ಹಾಲರವಿ ಸೇವೆ ನಡೆಯಿತು.

ಬಲಿಪಾಡ್ಯಮಿ ದಿನವಾದ ಬುಧವಾರ ಜಾತ್ರಾ ಮಹೋತ್ಸವ ಮತ್ತು ಅಗ್ನಿ ಕೊಂಡೋತ್ಸವ ಪೂಜೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿದ್ದ ರಥದಲ್ಲಿ ಕೂರಿಸಿ, ಮಹಾ ಮಂಗಳಾರತಿ ನೆರವೇರಿಸಿದರು. ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ರಾತ್ರಿ ಕೊಂಡೋತ್ಸವ ನಡೆಯಿತು. ದೇವಸ್ಥಾನದ ಭಕ್ತ ಮಂಡಳಿ ವತಿಯಿಂದ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಸ್ವಾಮಿಗೆ ಗುರುವಾರ ಪಾನಕ ಪೂಜೆ ಬಳಿಕ ಪಂಜಿನ ಸೇವೆ ನಡೆಸಲಾಯಿತು. ಉತ್ಸವ ಮೂರ್ತಿಯನ್ನು ಸಂಜೆ ಪಟ್ಟಣದಾದ್ಯಂತ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net