

ಪಿರಿಯಾಪಟ್ಟಣ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುರುವಾರ ಸಂಜೆ ಸುರಿದ ಸಾಧಾರಣ ಮಳೆಯಿಂದಾಗಿ ತಂಪಾದ ವಾತಾವರಣ ನಿರ್ಮಾಣವಾಗಿದೆ.
ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಪ್ರಾರಂಭವಾದ ಮಳೆಯು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮನೆಗೆ ಹೋಗುವ ವೇಳೆಯಲ್ಲಿ ಸಹ ಬೀಳುತ್ತಿತ್ತು. ಇದರಿಂದ ಮಕ್ಕಳು ಮಳೆಯಲ್ಲೇ ನೆನೆದು ಮನೆ ತಲುಪುವಂತಾಯಿತು. ಕಳೆದು ಕೆಲವು ದಿನಗಳಿಂದ ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಗುರುವಾರ ಬಿದ್ದ ಸಾಧಾರಣ ಮಳೆಯಿಂದ ಶುಂಠಿ, ಮುಸುಕಿನ ಜೋಳ, ದ್ವಿದಳ ಧಾನ್ಯ ಮತ್ತಿತರ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.