ಮಳೆಗೆ ಕುಸಿದುಬಿದ್ದ ಹೊಮ್ಮರಗಳ್ಳಿ ಶಾಲೆಯ ಅಡುಗೆಕೋಣೆ

IMG_20220906_104501
Published on

ಹಂಪಾಪುರ: ಸುರಿಯುತ್ತಿರುವ ಧಾರಾಕಾರ ಮಳೆಗೆ ಎಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿಯ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಅಕ್ಷರ ದಾಸೋಹ ಅಡುಗೆ ಕೋಣೆ ಬುಧವಾರ ಬೆಳಗ್ಗೆ ಕುಸಿದು ಬಿದ್ದಿದೆ.


ಗೋಡೆ ಕುಸಿದು ಶಾಲಾ ಕಾಂಪೌಂಡ್ ಸಮೇತ ನೆಲಸಮಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 2002-03ನೇ ಸಾಲಿನಲ್ಲಿ ನಿರ್ಮಾಣವಾಗಿದ್ದ ಈ ಕೊಠಡಿ ಕಳಪೆ ಕಾಮಗಾರಿಯಿಂದಾಗಿ ನೆಲಸಮಗೊಂಡಿರಬಹುದೆಂದು ಎಸ್‌ಡಿಎಂಸಿ ಸದಸ್ಯರು ಹಾಗೂ ಸಾರ್ವಜನಿಕರು ದೂರಿದ್ದಾರೆ.
ಅಧಿಕಾರಿಗಳು ಹಾಗೂ ಹೊಮ್ಮರಗಳ್ಳಿ ಗ್ರಾಮ ಪಂಚಾಯಿತಿ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಅಡುಗೆ ಕೋಣೆ ಹಾಗೂ ಪಕ್ಕದಲ್ಲಿಯೇ ಇರುವ ಹಳೆಯ ಗ್ರಂಥಾಲಯ ಕೊಠಡಿಗಳೆರಡೂ ತೀವ್ರ ದುಸ್ಥಿತಿಯಲ್ಲಿದ್ದು ಯಾವುದೇ ಸಂದರ್ಭದಲ್ಲಿಯಾದರೂ ಕುಸಿಯಬಹುದು. ಈ ಕೊಠಡಿಗಳನ್ನು ನೆಲಸಮಗೊಳಿಸುವಂತೆ ಆಗ್ರಹಿಸಿದ್ದಾರೆ.
ಕಳೆದ ಸಾಲಿನಲ್ಲಿ ಹೊಸದಾಗಿ ಎರಡು ಕೊಠಡಿಗಳು ನಿರ್ಮಾಣವಾಗಿದ್ದರೂ ಗುತ್ತಿಗೆದಾರ ಕೊಠಡಿಗಳ ಕೀಗಳನ್ನು ನೀಡದ ಪರಿಣಾಮ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ. ಹೊಸ ಕೊಠಡಿಗಳಾಗಿದ್ದರೂ ಪ್ರಯೋಜನವಿಲ್ಲದಂತಾಗಿದ್ದು, ಸಂಬಂಧಪಟ್ಟ ಇಂಜಿನಿಯರ್ ಹಾಗೂ ಜನಪ್ರತಿನಿಧಿಗಳು ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net