

ಬೆಂಗಳೂರು: ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರೆಪೀಡಿತ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಈವರೆಗಿನ ಹಾನಿಗೆ ಪರಿಹಾರ ಬಿಡುಗಡೆ ಮಾಡಲು ಅಗತ್ಯ ಅನುದಾನದ ಲಭ್ಯವಿದ್ದು, ತಡಮಾಡದೇ, ನೆಪ ಹೇಳದೇ ಸಂತ್ರಸ್ತರಿಗೆ ವಿತರಿಸುವಂತೆ ನಿರ್ದೇಶನ ನೀಡಿದ್ದಾರೆ. ಅತಿಯಾದ ಮಳೆಯಿಂದ ಸಮಸ್ಯೆಗೆ ಸಿಲುಕಿರುವ ಜಿಲ್ಲೆಗಳ ಪರಿಸ್ಥಿತಿ ಅವಲೋಕನ ನಡೆಸಲು ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಸಿಎಂ, ಕಂದಾಯ, ಪೊಲೀಸ್, ಅಗ್ನಿಶಾಮಕ ಇಲಾಖೆ ಮತ್ತು ಇತರ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳಲ್ಲಿ ಆಗಿರುವ ಹಾನಿ, ನದಿಗಳ ಪರಿಸ್ಥಿತಿ, ಜನಜೀವನ, ರಕ್ಷಣಾ ಕಾರ್ಯದ ಬಗ್ಗೆ ವಿವರಣೆ ನೀಡಿದರು. ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಸುನಿಲ್ ಕುಮಾರ್, ನಾರಾಯಣಗೌಡ, ಕೋಟ ಶ್ರೀನಿವಾಸ ಪೂಜಾರಿ, ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಇತತರು ಇದ್ದರು.
ಜನರ ಸ್ಥಳಾಂತರಕ್ಕೆ ಸಲಹೆ: ಕಳೆದ ಸಾಲಿನ ಮಳೆಗಾಲದಲ್ಲಿ ಗುಡ್ಡ ಕುಸಿದು ಅಪಾರ ಪ್ರಮಾಣದಲ್ಲಿ ಜೀವಹಾನಿಯಾದ ಸ್ಥಳಗಳಲ್ಲಿ ಮುಂಜಾಗ್ರತೆ ವಹಿಸಲು ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚನೆ ನೀಡಿದೆ. ಇನ್ನು ಮುಂದೆ ಮಳೆ ಹೆಚ್ಚಾಗುವ ಕಾರಣ ಈಗಲೇ ಗುಡ್ಡ ಕುಸಿತವಾಗಿರುವ ಭಾಗದ ಜನರನ್ನು ತಕ್ಷಣವೇ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಹಾಗೆಯೇ ಕೆಲವು ಕಡೆ ರಸ್ತೆ ಮೇಲೆ ಗುಡ್ಡ ಕುಸಿದಿದೆ. ಕೂಡಲೇ ಕ್ಲಿಯರ್ ಮಾಡುವ ಉದ್ದೇಶದಿಂದ ಟಾಸ್ಕ್ಫೋರ್ಸ್ ಮಾಡಿಕೊಂಡು ಕಾರ್ಯನಿರ್ವಹಿಸುವಂತೆ ತಿಳಿಸಲಾಗಿದೆ.
ನೆರೆ ಪರಿಹಾರ, ನಿರ್ವಹಣೆಗೆ 735 ಕೋಟಿ ರೂ.: ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬಳಿ 735.59 ಕೋಟಿ ರೂ. ಲಭ್ಯವಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದು, ಪರಿಹಾರ ಕಾರ್ಯಗಳಿಗೆ ಸದ್ಬಳಕೆ ಮಾಡುವಂತೆ ಸೂಚಿಸಲಾಗಿದೆ. ಮಾರ್ಗಸೂಚಿಯನ್ವಯ ಪರಿಹಾರ ನೀಡಿ. ತೊಡಕುಗಳಿದ್ದಾಗ, ವಿಶೇಷ ಸಂದರ್ಭದಲ್ಲಿ ವಿಪತ್ತು ನಿರ್ವಹಣೆ ವಿಭಾಗದ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಕೆಲಸ ನಿರ್ವಹಿಸುವಂತೆ ಸಿಎಂ ಸೂಚಿಸಿದರು.
55 ಕೋಟಿ ರೂಪಾಯಿ ಬಿಡುಗಡೆ: ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 2022-23ನೇ ಸಾಲಿನ ಪ್ರವಾಹ ಪರಿಹಾರಕ್ಕೆ 55 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಈ ಅನುದಾನ ನೀಡಲಾಗಿದೆ. ಕೇಂದ್ರ ಸರ್ಕಾರದ ಎಸ್ಡಿಆರ್ಎಫ್, ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ ಈ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬಾಗಲಕೋಟೆ, ಬೀದರ್ ಸೇರಿ 26 ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಈ ಹಣ ಹಂಚಿಕೆ ಮಾಡಲಾಗಿದೆ.
ಬಿಡುವು ಕೊಡದ ಮಳೆ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಿತಿ ಮೀರಿ ಮಳೆಯಾಗುತ್ತಿದೆ. ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ ಕರಾವಳಿಯಲ್ಲಿ ಸರಾಸರಿ 200 ಮಿಮೀವರೆಗೂ ಮಳೆಯಾಗಿದೆ. ಭಟ್ಕಳ, ಕಾರವಾರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕಾರವಾರ ಬಿಣಗಾ, ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ನಿಂತ ಪರಿಣಾಮ ಬೆಳಗ್ಗೆ 5 ರಿಂದ 11ರವರೆಗೂ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕದ್ರಾ ಅಣೆಕಟ್ಟೆಯ 4 ಗೇಟ್ಗಳನ್ನು ತೆರೆದು ನೀರನ್ನು ಹೊರ ಬಿಡಲಾಗುತ್ತಿದೆ. ಭಟ್ಕಳ ಸಮೀಪ ದೊಡ್ಡ ಬಂಡೆಕಲ್ಲು ರಸ್ತೆಗೆ ಅಪ್ಪಳಿಸಿದೆ.
120 ಅಡಿಗೆ ತಲುಪಿದ ಕೆಆರ್ಎಸ್: ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷ್ಣರಾಜಸಾಗರ ಅಣೆಕಟ್ಟೆಗೆ 37,819 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 5680 ಕ್ಯೂಸೆಕ್ ಹೊರಬಿಡಲಾಗುತ್ತಿದೆ. 124.80 ಗರಿಷ್ಠ ಮಟ್ಟದ ಅಣೆಕಟ್ಟೆಯ ನೀರಿನ ಮಟ್ಟ ಶುಕ್ರವಾರ ಸಂಜೆ ವೇಳೆಗೆ 120.46 ಅಡಿಗೆ ತಲುಪಿದ್ದು, 43.631(ಗರಿಷ್ಠ 49.454) ಟಿಎಂಸಿ ನೀರಿನ ಸಂಗ್ರಹವಿದೆ.
ಶಿರಸಿ: ಆದಿಕವಿ ಪಂಪ ಹಾಡಿ ಹೊಗಳಿದ ಬನವಾಸಿಯ ಮಧುಕೇಶ್ವರನ ದೇವಸ್ಥಾನ ಸೋರುತ್ತಿದೆ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದು, ದಕ್ಷಿಣ ಭಾರತದಲ್ಲಿಯೇ ಅತೀ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಪುರಾತತ್ವ ಇಲಾಖೆ ವ್ಯಾಪ್ತಿಗೆ ದೇವಾಲಯ ಸೇರ್ಪಡೆಯಾದ ಬಳಿಕ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಸಿಎಂ ಪ್ರವಾಸ ರದ್ದು: ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ. ಹಾಗಾಗಿ ಸಿಎಂ ಬೊಮ್ಮಾಯಿ ಅವರ ಶನಿವಾರ ಮತ್ತು ಭಾನುವಾರದ ಧಾರವಾಡ, ಹಾವೇರಿ ಪ್ರವಾಸ ಮುಂದೂಡಲಾಗಿದೆ.