

ಮೂಡಲಗಿ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಭಾನುವಾರ ಮೂಡಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಂಗಾಪುರ ಗ್ರಾಮದ ಲಕ್ಷ್ಮಣ ಮರನೂರ (45) ಕೊಲೆಯಾದ ವ್ಯಕ್ತಿ. ಇದೇ ಗ್ರಾಮದ ರಂಗಪ್ಪ ಪಾಟೀಲ, ಕಾಮದಿನ್ನಿ ಗ್ರಾಮದ ಈರಪ್ಪ ತುಂಗಳ ಬಂಧಿತರು.
ಭಾನುವಾರ ಮಧ್ಯಾಹ್ನ ಮೂಡಲಗಿ ಪಟ್ಟಣದ ಚನ್ನಮ್ಮ ವತ್ತದ ಬಾರ್‌ವೊಂದರಲ್ಲಿ ಮದ್ಯಪಾನ ಮಾಡುತ್ತಿದ ವೇಳೆ ಅಲ್ಲಿಯೇ ಮದ್ಯ ಸೇವನೆ ಮಾಡುತ್ತಿದ್ದ ರಂಗಪ್ಪ ಪಾಟೀಲ (27) ಹಾಗೂ ಆತನ ಸ್ನೇಹಿತ ಈರಪ್ಪ ತುಂಗಳ ಈ ಮೂವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ನಂತರ ಬಾರ್‌ನಿಂದ ಹೊರಗಡೆ ಬಂದು ರಸ್ತೆ ಬದಿಯಲ್ಲಿ ಮತ್ತೆ ರಂಗಪ್ಪ ಮತ್ತು ಈರಪ್ಪ ಇಬ್ಬರು ಲಕ್ಷ್ಮಣನ ಮೇಲೆ ಮನಬಂದಂತ ಹಲ್ಲೆ ಮಾಡಿದ್ದರಿಂದ ಲಕ್ಷ್ಮಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಈ ವಿಚಾರ ಪೊಲೀಸರಿಗೆ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಆಗ ಇದು ಸಹಜ ಸಾವು ಎಂದು ಭಾವಿಸಿದ್ದರು. ಆದರೆ, ಸ್ಥಳೀಯರನ್ನು ವಿಚಾರಿಸಿದಾಗ ಬಾರ್‌ವೊಂದರಲ್ಲಿ ಜಗಳವಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿತು. ಮಾಹಿತಿ ಆಧಾರದ ಮೇಲೆ ಮದ್ಯ ದಂಗಡಿಯ ಸಿಸಿಟಿವಿ ವೀಕ್ಷಣೆ ಹಾಗೂ ಹಲ್ಲೆ ಮಾಡಿರುವ ವಿಡಿಯೋ ವೀಕ್ಷಣೆ ಮಾಡಿ ಆರೋಪಿಗಳನ್ನು ಪತ್ತೆ ಮಾಡಿ ಬಂಧನ ಮಾಡಿದರು.