ಮರದೂರು-2 ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಡಿಸಿಎಂಗೆ ಮನವಿ

manjunath
Published on

ಹನಗೋಡು: ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಮರದೂರು-2 ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ತಾತ್ಕಾಲಿಕ ತಡೆಯನ್ನು ತೆರವುಗೊಳಿಸಿ, ಯೋಜನೆ ಅನುಷ್ಠಾನಕ್ಕೆ ಇಲಾಖೆ ಮುಖ್ಯಸ್ಥರಿಗೆ ನಿರ್ದೇಶಿಸಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮನವಿ ಸಲ್ಲಿಸಿದರು.


ಬೆಂಗಳೂರಿನ ವಿಧಾನಸೌಧದಲ್ಲಿ ಸಚಿವರನ್ನು ಭೇಟಿ ಮಾಡಿದ ಎಚ್.ಪಿ.ಮಂಜುನಾಥ್ ತಾಲೂಕಿನ ಮರದೂರು ಬಳಿಯ ಲಕ್ಷ್ಮಣತೀರ್ಥ ನದಿಯಿಂದ ಬಿಳಿಕೆರೆ ಹೋಬಳಿಯ 47 ಕೆರೆಗಳಿಗೆ 85 ಕೋಟಿ ರೂ. ವೆಚ್ಚದಡಿ ಏತನೀರಾವರಿ ಮುಖಾಂತರ ನೀರು ತುಂಬಿಸುವ ಯೋಜನೆಗೆ ಈ ಹಿಂದೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಕಾಮಗಾರಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಆದರೆ, ಸರ್ಕಾರ ಕಾಮಗಾರಿಗಳಿಗೆ ತಡೆಹಿಡಿಯುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಈ ಯೋಜನೆಯಿಂದ ಅನುಕೂಲವಾಗುವ 70ಕ್ಕೂ ಹೆಚ್ಚು ಹಳ್ಳಿಗಳು ಮಳೆಯಾಶ್ರಿತ ಪ್ರದೇಶವಾಗಿದ್ದು, ಇಲ್ಲಿನ ಜನ-ಜಾನುವಾರುಗಳಿಗೆ ಕುಡಿಯಲು ನೀರು, ಅಂತರ್ಜಲ ಮಟ್ಟದ ಸುಧಾರಣೆಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟರು.


ಯೋಜನೆಯ ಅನುಮೋದನೆಗಾಗಿ ಹತ್ತು ವರ್ಷಗಳಿಂದ ಪ್ರಯತ್ನಿಸಿದ್ದೇನೆ. ಈ ಹಿಂದೆ ಟೆಂಡರ್ ಪ್ರಕ್ರಿಯೆ ಸಹ ನಡೆದಿತ್ತು. ಈಗ ನಮ್ಮದೇ ಸರ್ಕಾರವಿದ್ದು, ತಾಲೂಕಿನ ರೈತರ ಹಿತದೃಷ್ಟಿಯಿಂದ ಯೋಜನೆಗೆ ಚಾಲನೆ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಮಂಜುನಾಥ್ ‘ವಿಜಯವಾಣಿ’ಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net