ಮರ ಕಡಿಯುವುದಕ್ಕೆ ನಿರ್ಬಂಧಕ್ಕೆ ಮನವಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

highcourt
Published on

ಬೆಂಗಳೂರು: ಕೊಡಗು ಜಿಲ್ಲೆಯ ಅರಣ್ಯ ಜಮೀನು ಸರ್ಕಾರಿ ಜಮೀನು, ಪಶ್ಚಿಮಘಟ್ಟ ಪ್ರದೇಶ ಹಾಗೂ ಬಾಣೆ, ಜಮ್ಮಾ, ಜಾಗೀರು, ಉಂಬಳಿ ಜಮೀನಿನ ಹಿಡುವಳಿದಾರರ ಜಮೀನುಗಳಲ್ಲಿನ ಮರಗಳನ್ನು ಕಡಿಯುವುದನ್ನು ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ವಿಚಾರವಾಗಿ ಮಡಿಕೇರಿ ನಿವಾಸಿ ಕೆ.ಎ. ರವಿ ಚೆಂಗಪ್ಪ ಹಾಗೂ ವಿರಾಜಪೇಟೆ ನಿವಾಸಿ ಸಿ.ಸಿ ದೇವಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜಮ್ಮಾ-ಬಾಣೆ, ಉಂಬಳಿ, ಜಾಗೀರು ಹಾಗೂ ಇತರೆ ಜಮೀನುಗಳಿಗೆ ‘ಪರಾಧೀನ ಜಮೀನು’ ಎಂದು ಹೇಳಿ ಆ ಜಮೀನಿನಲ್ಲಿರುವ ಲಕ್ಷಾಂತರ ಮರಗಳನ್ನು ನಿರ್ದಾಕ್ಷ್ಯಿಣವಾಗಿ ನೆಲೆಕ್ಕೂರುಳಿಸಲಾಗಿದೆ. ಮರ ಕಡಿಯುವ ಸಂಬಂಧ ಸುಮಾರು ಆದೇಶಗಳನ್ನು ಹೊರಡಿಸಲಾಗಿದೆ. ಪರಾಧೀನ ಜಮೀನು ಎಂಬ ಪದ ಭೂ ಕಂದಾಯ ಕಾಯ್ದೆಯಲ್ಲೂ ಇಲ್ಲ, ಸರ್ಕಾರದ ಯಾವ ಅಧಿಸೂಚನೆಗಳಲ್ಲೂ ಈ ಪದ ಬಳಕೆ ಮಾಡಿಲ್ಲ. ಇದರ ಹಿಂದೆ ಜಿಲ್ಲೆಯ ಟಿಂಬರ್ ಮಾಫಿಯಾ ಕೆಲಸ ಮಾಡುತ್ತಿದೆ. ಮರಗಳನ್ನು ಕಡಿಯುವುದಕ್ಕೆ ಬಿಟ್ಟರೆ ಇತ್ತಿಚೇಗೆ ಕೇರಳದ ವಯನಾಡ್‌ನಲ್ಲಿ ಸಂಭವಿಸಿದಂತೆ ಕೊಡಗು ಜಿಲ್ಲೆಯಲ್ಲೂ ಭೂಕುಸಿತ ಆಗಬಹುದು ಎಂದರು

ಅಲ್ಲದೆ, 2018ರಲ್ಲಿ ಜಿಲ್ಲೆಯಲ್ಲಿ ನಡೆದ ಭೂಕುಸಿತಕ್ಕೆ ಮರಗಳನ್ನು ಕಡಿದಿರುವುದೇ ಕಾರಣ. ಹಾಗಾಗಿ, ಕೊಡಗು ಉಳಿಸಬೇಕಾಗಿದೆ. ಆದ್ದರಿಂದ ಮರಗಳನ್ನು ಕತ್ತರಿಸಿದಂತೆ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ,ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ 14 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು. ಮುಂದಿನ ವಿಚಾರಣೆಯ ಅವಧಿಯೊಳಗೆ ಮರಗಳನ್ನು ಕಡಿದಿದ್ದರೆ ಅದರ ಮಾಹಿತಿಯನ್ನು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಇದೇ ವೇಳೆ ನ್ಯಾಯಪೀಠ ಸೂಚಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net