ಮನೆಗಳ ವರದಿ ಸಲ್ಲಿಕೆಗೆ ವಿಳಂಬ ಬೇಡ

20 nrp 2 sabhe
ಎನ್.ಆರ್.ಪುರ ತಾಲೂಕಿನಲ್ಲಿ ಅತಿವೃಷ್ಟ್ಠಿಯಿಂದ ಸಂಭವಿಸಿರುವ ಮನೆಗಳ ಹಾನಿ ಬಗ್ಗೆ ತಾಪಂನಲ್ಲಿ ಸಭೆ ನಡೆಯಿತು. ತಹಸೀಲ್ದಾರ್ ಡಾ. ನೂರುಲ್ ಹುದಾ, ಎಚ್.ಡಿ.ನವೀನ್‌ಕುಮಾರ್, ಸಾಗರ್ ಇದ್ದರು.
Published on

ಎನ್.ಆರ್.ಪುರ: ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ವರದಿ ಸಲ್ಲಿಸಲು ವಿಳಂಬವಾಗದಂತೆ ಎಚ್ಚರ ವಹಿಸಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಹಸೀಲ್ದಾರ್ ಡಾ. ನೂರುಲ್ ಹುದಾ ತಿಳಿಸಿದರು.

ಅತಿವೃಷ್ಟಿಯಿಂದ ಸಂಭವಿಸಿರುವ ಮನೆಗಳ ಹಾನಿ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅತಿಯಾದ ಗಾಳಿ ಮಳೆಗೆ ಹಾನಿಗೊಳಗಾದ ಮನೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ನಿಖರವಾದ ಮಾಹಿತಿ ಸಿದ್ಧಪಡಿಸಿ, ಪರಿಹಾರಕ್ಕೆ ಅರ್ಹವಿರುವ ಹಾನಿಗೊಳಗಾದ ಮನೆಗಳ ಕಡತಗಳನ್ನು ಮೇಲಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಹೇಳಿದರು.

ವರದಿ ನೀಡಲು ನಮ್ಮ ಹಂತದಲ್ಲಿ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ವರದಿ ಆಧರಿಸಿ ಅರ್ಹರಿಗೆ ಮಾತ್ರ ಸರ್ಕಾರದಿಂದ ಪರಿಹಾರ ಧನ ಬಿಡಗಡೆಯಾಗುತ್ತದೆ. ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿ, ವರದಿ ಸಿದ್ಧಪಡಿಸಿ ತಾಂತ್ರಿಕ ವರದಿಯನ್ನು ಜಿಪಂ ಇಂಜಿನಿಯರಿಂಗ್ ವಿಭಾಗಕ್ಕೆ ಕಳುಹಿಸಬೇಕೆಂದು ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.

ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಎಚ್.ಮಂಜುನಾಥ್ ಮಾತನಾಡಿ, ಕೆಲವು ಅನಧಿಕೃತ ಮನೆಗಳು ಹಾನಿಗೊಳಗಾಗಿವೆ. ಸರ್ಕಾರದಿಂದ ಅನಧಿಕೃತ ಮನೆಗಳಿಗೆ ಪರಿಹಾರ ಧನ ನೀಡುವ ಬಗ್ಗೆ ಆದೇಶ ಅಥವಾ ಸೂಕ್ತ ಮಾರ್ಗದರ್ಶನ ಬರುವವರೆಗೂ ಅಂತಹ ವರದಿಗಳನ್ನು ತಾತ್ಕಾಲಿಕವಾಗಿ ವಿಲೇ ಇಡಲಾಗಿದೆ ಎಂದು ತಿಳಿಸಿದರು.

ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳು ಹಾನಿಯಾದರೆ ಕೂಡಲೇ ಪಿಡಿಒ ಅವರು ಭೇಟಿ ನೀಡಿ, ಕಂದಾಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು. ಜಿಪಂ ಇಂಜಿನಿಯರಿಂಗ್ ವಿಭಾಗದ ಎಇಇ ಸಾಗರ್ ಹಾಗೂ ಪಿಡಿಒ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net