ಮನೆ ಬಾಗಿಲಿಗೆ ದಾಖಲೆ ನೀಡುವುದು ರೈತರಿಗೆ ಅನುಕೂಲ: ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಅಭಿಮತ, ರಾಮನಗರ ತಾಲೂಕಿನ ಮಾದಾಪುರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ

12 RMG DC 1 Kandaya Ilake Programme Dc Madapura
Published on

ರಾಮನಗರ: ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವವರಿಗೆ ಉಚಿತವಾಗಿ ಆರ್‌ಟಿಸಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಇದು ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹೇಳಿದರು.

ತಾಲೂಕಿನ ಮಾದಾಪುರದಲ್ಲಿ ಕಂದಾಯ ದಾಖಲೆಯನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಕಂದಾಯ ದಾಖಲೆ ಮನೆ ಬಾಗಿಲಿಗೆ ತಲುಪಿಸುವ ಜನಸ್ನೇಹಿ ಕಾರ್ಯಕ್ರಮವಾಗಿದ್ದು, ಜಿಲ್ಲೆಯಲ್ಲಿರುವ 823 ಕಂದಾಯ ಗ್ರಾಮಗಳಲ್ಲಿ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ಒದಗಿಸಲಾಗುತ್ತಿದೆ ಎಂದರು. ಇನ್ನೂ ಕೆಲವು ಗ್ರಾಮಸ್ಥರಿಗೆ ಮಾ.21ರಿಂದ 26ರವರೆಗೆ ಉಚಿತವಾಗಿ ದಾಖಲೆಗಳನ್ನು ನಾಡಕಚೇರಿಯಲ್ಲಿ ನೀಡಲಾಗುವುದು ಎಂದರು.

ಕಂದಾಯ ಇಲಾಖೆ 54 ವಿವಿಧ ಸೇವೆಯನ್ನು ಜನರಿಗೆ ಒದಗಿಸುತ್ತ್ತಿದೆ. ಗ್ರಾಮೀಣರು ಹಾಗೂ ರೈತರಿಗೆ ಉತ್ತಮ ಹಾಗೂ ಪಾರದರ್ಶಕ ಸೇವೆ ನೀಡಲು ಕಂದಾಯ ಇಲಾಖೆ ವಿನೂತನ ಯೋಜನೆಗಳನ್ನು ಜಾರಿಗೆ ತಂದಿದೆ. ಜನರ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ನೀಡಲು ತಿಂಗಳಿನ ಮೂರನೇ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಸಾಮಾಜಿಕ ಪಿಂಚಣಿಗಳನ್ನು ಅವರ ಮನೆ ಬಾಗಿಲಿಗೆ ನೀಡಲು ನವೋದಯ ಆ್ಯಪ್ ಸೇವೆ ಒದಗಿಸುತ್ತಿದೆ. ಈ ಹಿಂದೆ ಆರ್.ಟಿ.ಸಿಯನ್ನು ಲಿಖಿತ ರೂಪದಲ್ಲಿ ನೀಡಲಾಗುತ್ತಿತ್ತು. ಇಂದು ಗಣಕೀಕೃತ ರೂಪದಲ್ಲಿ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಕಡಿಮೆ ಸಮಯದಲ್ಲಿ ಸೇವೆ ನೀಡಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ. ಪೋಡಿ ದುರಸ್ತಿ, ಅರಣ್ಯ ಜಮೀನು ಡಿನೋಟಿಫಿಕೇಷನ್ ಸೇರಿ ಕೆಲವು ಸಮಸ್ಯೆಗಳಿವೆ. ಹಂತ ಹಂತವಾಗಿ ಅವುಗಳನ್ನು ಪರಿಹರಿಸಲಾಗುವುದು ಎಂದರು.

ರಾಮನಗರ ತಹಸೀಲ್ದಾರ್ ಎಂ.ವಿಜಯಕುಮಾರ್, ಮಾಯಗಾನಹಳ್ಳಿ ಗ್ರಾಪಂ ಅಧ್ಯಕ್ಷ ಪ್ರಕಾಶ್, ಗ್ರಾಪಂ ಉಪಾಧ್ಯಕ್ಷೆ ಶೋಭಾ, ಸದಸ್ಯ ವೆಂಕಟೇಶ್ ಮೂರ್ತಿ, ರಾಜಸ್ವ ನಿರೀಕ್ಷಕರಾದ ಪ್ರಸನ್ನಕುಮಾರ್, ನಾಗರಾಜು, ಗ್ರಾಮಲೆಕ್ಕಾಧಿಕಾರಿ ನಿವೇದಿತಾ, ಗ್ರಾಮ ಸಹಾಯಕ ಪ್ರಭು ಇತರರು ಉಪಸ್ಥಿತರಿದ್ದರು.

ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆ ನೀಡುವುದು ಉಪಯುಕ್ತವಾಗಿದೆ. ಇದರಿಂದ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ರೈತರು ತಮ್ಮ ಕೆಲಸಕಾರ್ಯ ಬಿಟ್ಟು ಕಚೇರಿಗೆ ಅಲೆಯುವುದು ತಪ್ಪಲಿದೆ. ಜತೆಗೆ ರೈತರಿಗೆ ದಾಖಲಾತಿ ಪೆಡೆಯಲು ಆಗುತ್ತಿದ್ದ ಖರ್ಚು, ಸಮಯ ಉಳಿತಾಯ ಆಗಲಿದೆ. ಎಂ.ವಿ.ವೆಂಕಟೇಶ್‌ಮೂರ್ತಿ, ಗ್ರಾಪಂ ಸದಸ್ಯ, ಮಾದಾಪುರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net