ಮನಸ್ಸಿನ ಸಿದ್ಧತೆಯೊಂದಿಗೆ ಪರೀಕ್ಷೆ ಎದುರಿಸಿ

21bhr 1
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರೀಕ್ಷೆ ಪೂರ್ವ ಸಿದ್ಧತೆ, ಪ್ರೇರಣಾ ನುಡಿ ಶಿಬಿರವನ್ನು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎನ್.ಮರಿಗೌಡ ಉದ್ಘಾಟಿಸಿದರು. ಪುಷ್ಪಾ, ಡಾ.ವೈ.ಎ.ಸುರೇಶ್, ಟಿ.ಎಂ.ಉಮೇಶ್, ಎಂ.ಎಸ್.ಚನ್ನಕೇಶವ್ ಇದ್ದರು.
Published on

ಬಾಳೆಹೊನ್ನೂರು: ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಸಿದ್ಧ ಮಾಡಿಕೊಂಡು ಪರೀಕ್ಷೆ ಎದುರಿಸಬೇಕೆ ಹೊರತು ದೇಹ ಸಿದ್ಧತೆಯೊಂದಿಗೆ ಅಲ್ಲ ಎಂದು ಉಪನ್ಯಾಸಕ ಎಚ್.ಎ.ಪ್ರಕಾಶ್ ಹೇಳಿದರು. ಒಕ್ಕಲಿಗರ ಸಮುದಾಯ ಭವನದಲ್ಲಿ ಬಿಜಿಎಸ್ ವಿದ್ಯಾಸಂಸ್ಥೆ, ಎನ್.ಆರ್.ಪುರ ಬಿಇಒ ಕಚೇರಿ ಹಾಗೂ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದಿಂದ ಬುಧವಾರ ತಾಲೂಕಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪರೀಕ್ಷಾ ಪೂರ್ವಸಿದ್ಧತೆ, ಪ್ರೇರಣಾ ಶಿಬಿರದಲ್ಲಿ ಮಾತನಾಡಿದರು. ಎಲ್ಲ ವಿದ್ಯಾರ್ಥಿಗಳಲ್ಲಿ ಅದಮ್ಯ ಶಕ್ತಿಯಿದ್ದು, ನಿಮ್ಮ ಶಕ್ತಿ ಬಗ್ಗೆ ವಿಶ್ವಾಸ ಹೊಂದಿರಬೇಕು. ನಿಮ್ಮಲ್ಲಿನ ಸಾಮರ್ಥ್ಯ ಅರಿತುಕೊಳ್ಳಬೇಕು.ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಬೇಕು. ಪರೀಕ್ಷೆ ವಿಷಯದಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡದೇ ಕೇವಲ ಗುರಿ ಹೊಂದಿ ನಿಮಗೆ ನೀವೇ ಸ್ಪರ್ಧೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರೌಢಾವಸ್ಥೆಯ ಕೊನೆ ಹಂತವಾಗಿದ್ದು, ಪರೀಕ್ಷೆ ಎದುರಿಸುವಾಗ ವಿದ್ಯಾರ್ಥಿಗಳಿಗೆ ತರಬೇತಿ ಅಗತ್ಯ. ಪರೀಕ್ಷೆ ವೇಳೆ ಯಾವುದೇ ಆತಂಕ, ಗೊಂದಲ ಪಡದೇ ಪ್ರಶ್ನೆ ಪತ್ರಿಕೆಗಳನ್ನು ಓದಿ ಉತ್ತರಿಸಲು ಸಿದ್ಧರಾಗಬೇಕು. ಉತ್ತಮವಾಗಿ ವಿದ್ಯಾಭ್ಯಾಸ ನಡೆಸಿ ಪಾಲಕರು, ಶಾಲೆಗೆ ಹೆಸರು ತರಬೇಕು ಎಂದರು. ಪಿಎಸಿಎಸ್ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ಮಾತನಾಡಿ, ಇಂದು ವಿದ್ಯಾಭ್ಯಾಸ ಇಲ್ಲದಿದ್ದರೆ ಬೆಲೆ ಇಲ್ಲ. ಬೆರಳ ತುದಿಯಲ್ಲಿ ಇಂದು ಜಗತ್ತು ನಮ್ಮ ಮುಂದಿದ್ದು, ವಿದ್ಯಾರ್ಥಿಗಳು ತಂದೆ ತಾಯಿ ಇಚ್ಛೆಯಂತೆ ಶ್ರಮವಹಿಸಿ ವಿದ್ಯಾಭ್ಯಾಸ ಮಾಡಬೇಕು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿದರೆ ಸಮಾಜದಲ್ಲಿ ಹೆಸರು ಪಡೆಯಲು ಸಾಧ್ಯವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net