ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ ಪರಕಾಯ ಪ್ರವೇಶ ಮಾಡುವ ಸಾಹಿತ್ಯ

book
Published on

ಪರಕಾಯ ಪ್ರವೇಶ ಮಾಡುವ ಸಾಹಿತ್ಯ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ ಎಂದು ಹಿರಿಯ ಸಾಹಿತಿ ಸಿ.ಪಿ.ಕೃಷ್ಣ ಕುಮಾರ್ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ ಮತ್ತು ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ರಜಿನಿ ಅವರ ಭಾವಗಳ ಗುಚ್ಛ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಹಿತ್ಯ ಪರಕಾಯ ಪ್ರವೇಶ ಮಾಡಬೇಕು ಎಂದರು.

ಕಾವ್ಯ ಎಂದಿಗೂ ಅಳು ತರಿಸಬಾರದು, ನಗಿಸಬೇಕು. ಎಲ್ಲರನ್ನೂ ಒಂದಾಗಿಸುವ ಗುಣ ಇರಬೇಕು. ಲೇಖಕಿ ರಜಿನಿಯ ಅವರ ಭಾವನೆಗಳ ಗುಚ್ಛ ಕವನ ಸಂಕಲನವೂ ಆ ಕೆಲಸವನ್ನು ಮಾಡಿದೆ. ಕವಿತೆಗಳು ಸಮೃದ್ಧವಾದ ವೈವಿಧ್ಯ ಇದೆ. ಪ್ರೀತಿ ಮತ್ತು ಕರುಣೆ ಕಟ್ಟಿ ಕೊಡಲಾಗಿದೆ, ಪರಿಪೂರ್ಣತೆ ಅಂಶಗಳು ಇವೆ. ಹಿರಿಯ ಸಾಹಿತಿ ಡಿವಿಜಿ ಅವರನ್ನು ಲೇಖಕಿ ಅನುಕರಿಸಿದ್ದಾರೆ ಎಂದು ಹೇಳಿದರು.

ಕವನ ಸಂಕಲನಕ್ಕೆ ಭಾವನೆಗಳ ಗುಚ್ಛ ಶೀರ್ಷಿಕೆ ನನಗೆ ತೃಪ್ತಿಕರವಾಗಿ ಕಾಣಸಲಿಲ್ಲ. ಕಾವ್ಯ ಎಂದರೆ ಬೆಳಕು, ರಂಜಿನಿ ಎಂದರೆ ರಾತ್ರಿ. ಹೀಗಾಗಿ ರಾತ್ರಿ ಕಳೆದ ಹಗಲು ಹೆಸರಿನಿಂದ ಇಡಬೇಕಿತ್ತು ಎಂದು ಹಾಸ್ಯ ಚಟಕಿ ಹಾರಿಸಿದರು.

ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ, ಮೊಬೈಲ್ ಗೀಳಿನಿಂದ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಡೀ ಪ್ರಪಂಚವೇ ನಮ್ಮ ಐದು ಬೆರಳುಗಳಲ್ಲಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಹೌದು, ಇದು ನಿಜ. ಆದರೆ, ಮಿತಿಮೀರಿ ಮೊಬೈಲ್ ಬಳಕೆ ಮಾಡಲಾಗುತ್ತಿದೆ. ಇದರಿಂದ ಮೌಲ್ಯಗಳು ನಶಿಸಿ ಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವೈದ್ಯ ವಾರ್ತಾ ಪ್ರಕಾಶನದ ಜೆ.ಪಿ.ಅರಸ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ರತ್ನ ಹಾಲಪ್ಪಗೌಡ, ಬಿ.ಎಂ.ರಜನಿ ಬಣವೆ, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಎಂ.ಜಿ.ಆರ್.ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net