ಮಧ್ಯವರ್ತಿಗಳಿಗೆ ಅವಕಾಶ ಬೇಡ

HUN-JAN-28-1(KHARIDI KENDRA INAGURATION)
ಹುಣಸೂರು ಎಪಿಎಂಸಿ ಆವರಣದಲ್ಲಿ ಆರಂಭಿಸಿರುವ ಬೆಂಬಲ ಬೆಲೆಯಡಿ ಧಾನ್ಯ ಖರೀದಿ ಕೇಂದ್ರಕ್ಕೆ ಶಾಸಕ ಮಂಜುನಾಥ್ ರೈತ ಮಹಿಳೆಯೊಂದಿಗೆ ಚಾಲನೆ ನೀಡಿದರು. ಹೊಸೂರು ಕುಮಾರ್, ವಾಣಿಶ್ರೀ, ಹಂಪಣ್ಣ, ಸೋಮಣ್ಣ, ನಿತಿನ್ ನಾಯಕ್ ಇತರರು ಇದ್ದರು.
Published on

ಹುಣಸೂರು: ಬೆಂಬಲ ಬೆಲೆಯಡಿ ಧಾನ್ಯ ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಸೂಚಿಸಿದರು.
ನಗರದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸರ್ಕಾರ ಈ ವರ್ಷವನ್ನು ಸಿರಿಧಾನ್ಯ ವರ್ಷ ಎಂದು ಘೋಷಿಸಿದೆ. ರಾಗಿ ಬೆಳೆದಿರುವ ರೈತರಿಗೆ ಆಶಾದಾಯಕವಾಗಿದೆ. ಭತ್ತಕ್ಕೆ 2040- 2060 ರೂ.ಗೆ ಖರೀದಿಸಲು ನಿರ್ಧರಿಸಿದ್ದು, ರೈತರಿಗೆ ನಷ್ಟ ಉಂಟಾಗಲಿದೆ. ಬೆಲೆ ಮರುಪರಿಶೀಲನೆ ಮಾಡುವಂತೆ ಸದನದಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಖರೀದಿ ಕೇಂದ್ರಗಳಲ್ಲಿ ಈ ಬಾರಿ ರೈತರು ತರುವ ರಾಗಿ ಮತ್ತು ಭತ್ತವನ್ನು ಪರಿಶೀಲಿಸಿ ಚೀಲ ಬದಲಾಯಿಸುತ್ತಿರುವುದು ಸರಿ. ಆದರೆ, ಇದಕ್ಕಾಗಿ ರೈತರಿಂದ ಯಾವುದೇ ಹಣ ವಸೂಲಿ ಮಾಡಬಾರದು. ಇಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ನಿಗದಿತ ದಿನದೊಳಗೆ ರೈತರ ಖಾತೆಗೆ ಹಣ ಪಾವತಿಯಾಗುವಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ಹೋಬಳಿ ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆಯಬೇಕು. ಇದರಿಂದ ಸಾಗಣೆ ವೆಚ್ಚ ಕಡಿಮೆಯಾಗಲಿದೆ. ಈಗಾಗಲೇ ಸಾಕಷ್ಟು ರೈತರು ಭತ್ತವನ್ನು ಮಾರಾಟ ಮಾಡಿದ್ದು, ಕೆಲ ರೈತರಿಗೆ ಮಾತ್ರ ನೆರವಾಗಲಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಮಾತ್ರ ಸ್ಥಳೀಯ ಭತ್ತ ಕ್ವಿಂಟಾಲ್‌ಗೆ 500 ರೂ. ಹೆಚ್ಚುವರಿಯಾಗಿ ನೀಡುತ್ತಿದ್ದು, ಇದು ತಾರತಮ್ಯ ನೀತಿಯಾಗಿದೆ. ರಾಜ್ಯದ ಎಲ್ಲ ಜಿಲ್ಲೆಗೂ ವಿಸ್ತರಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಕೃಷಿ ಮಾರಾಟ ಮಂಡಳಿಯ ಜಂಟಿ ನಿರ್ದೇಶಕಿ ಎಂ.ವಾಣಿಶ್ರೀ ಮಾತನಾಡಿ, ಸರ್ಕಾರವು 5 ಲಕ್ಷ ಮೆಟ್ರಿಕ್ ಟನ್ ರಾಗಿ ಹಾಗೂ 2 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಅವಕಾಶ ಕಲ್ಪಿಸಿದೆ. ಹುಣಸೂರು ಖರೀದಿ ಕೇಂದ್ರದಲ್ಲಿ ರಾಗಿ ಬೆಳೆಗೆ 5301 ಹಾಗೂ ರತ್ನಪುರಿ ಕೇಂದ್ರದಲ್ಲಿ 1850 ರೈತರು ಸೇರಿದಂತೆ 7151 ಜನರ ಒಟ್ಟು 1.18 ಲಕ್ಷ ಕ್ವಿಂಟಾಲ್ ಹಾಗೂ ಭತ್ತಕ್ಕೆ ಹುಣಸೂರು ಕೇಂದ್ರದಲ್ಲಿ 848 ಮಂದಿ, ರತ್ನಪುರಿಯಲ್ಲಿ 173ಮಂದಿ ಸೇರಿದಂತೆ 1021 ರೈತರಿಂದ 32 ಸಾವಿರ ಕ್ವಿಂಟಾಲ್ ಮಾರಾಟಕ್ಕೆ ನೋಂದಾಯಿಸಲಾಗಿದೆ. ನೋಂದಣಿಗೆ ಅವಕಾಶವಿದೆ. ರಾಗಿ, ಭತ್ತ ಪೂರೈಸುವ ರೈತರ ಬ್ಯಾಂಕ್ ಖಾತೆಗೆ 8- 10 ದಿನಗಳಲ್ಲಿ ಹಣ ಜಮೆಯಾಗಲಿದೆ ಎಂದು ತಿಳಿಸಿದರು.
ಖರೀದಿ ಕೇಂದ್ರಕ್ಕೆ ಪ್ರಥಮವಾಗಿ ರಾಗಿ ಪೂರೈಸಿದ ನಲ್ಲೂರು ಪಾಲದ ರೈತ ಮಹಿಳೆ ಸಾಕಮ್ಮ, ಉಯಿಗೌಡನಹಳ್ಳಿ ದಿನೇಶ್ ಅವರಿಗೆ ಶಾಸಕ ಮಂಜುನಾಥ್ ರಸೀದಿ ವಿತರಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ವೇತಾ ಮಂಜುನಾಥ್, ಸದಸ್ಯೆ ಪ್ರಿಯಾಂಕಾ ಥಾಮಸ್, ಖರೀದಿ ಕೇಂದ್ರದ ಅಧಿಕಾರಿಗಳಾದ ಸೋಮಣ್ಣ, ನಿತಿನ್‌ನಾಯಕ್, ಆಹಾರ ಇಲಾಖೆ ಶಿರಸ್ತೇದಾರ್ ರಾಮಚಂದ್ರ, ಎಪಿಎಂಸಿ ಕಾರ್ಯದರ್ಶಿ ಒ.ಹಂಪಣ್ಣ, ರೈತ ಸಂಘಧ ತಾಲೂಕು ಅಧ್ಯಕ್ಷ ಜಯರಾಂ, ಮುಖಂಡರಾದ ಪ್ರಭಾಕರಾರಾಧ್ಯ, ನಟರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net