ಮದ್ಯವರ್ಜನ ಶಿಬಿರ ಯಶಸ್ವಿಗೊಳಿಸಲು ತೀರ್ಮಾನ

HUN-JUNE-13-2(JSS MEETING)
Published on

ಹುಣಸೂರು: ಜೆಎಸ್‌ಎಸ್ ವಿದ್ಯಾಪೀಠ ಮತ್ತು ಜೆಎಸ್‌ಎಸ್ ಆಪ್ತ ಸಮಾಲೋಚನಾ ಕೇಂದ್ರದ ಸಹಯೋಗದಲ್ಲಿ ಪಟ್ಟಣದಲ್ಲಿ ಜು.1ರಿಂದ 10ರವರೆಗೆ ಆಯೋಜನೆಗೊಂಡಿರುವ ಮದ್ಯವರ್ಜನ ಶಿಬಿರವನ್ನು ಎಲ್ಲ ಸಮಾಜದ ಬಂಧುಗಳ ಸಹಕಾರದೊಂದಿಗೆ ಯಶಸ್ವಿಗೊಳಿಸಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.

ನಗರದ ಶ್ರೀ ಗುರುಬೂದಿ ಮಂಗಳ ಮಂಟಪದಲ್ಲಿ ಮಂಗಳವಾರ ಆಪ್ತ ಸಮಾಲೋಚನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರು, ಶಿಬಿರದ ಯಶಸ್ಸಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.
ಮುಖಂಡ ಹಂದನಹಳ್ಳಿ ಸೋಮಶೇಖರ್ ಮಾತನಾಡಿ, ಶಿಬಿರಾರ್ಥಿಗಳನ್ನು ಅವರ ಆರೋಗ್ಯ ಪರಿಸ್ಥಿತಿ ಗಮನಿಸಿ ನೋಂದಾಯಿಸಿಕೊಳ್ಳುವುದು ಸೂಕ್ತ ಎಂದರು.

ಡಾ.ವೃಷಭೇಂದ್ರಸ್ವಾಮಿ ಮಾತನಾಡಿ, ಮನಶಾಸ್ತ್ರಜ್ಞರು ಶಿಬಿರಾರ್ಥಿಯನ್ನು ಮೂರು ಹಂತಗಳಲ್ಲಿ ಕೌನ್ಸೆಲಿಂಗ್ ಮಾಡಲಿದ್ದಾರೆ. ಶಿಬಿರಾರ್ಥಿಗಳ ಮನಪರಿವರ್ತನೆಯೇ ಶಿಬಿರದ ಮೂಲ ಉದ್ದೇಶವಾಗಿರುತ್ತದೆ ಎಂದರು.

ಜೆಎಸ್‌ಎಸ್ ಆಪ್ತ ಸಮಾಲೋಚನಾ ಕೇಂದ್ರದ ಸಂಚಾಲಕ ಡಾ.ಎಂ.ಪಿ.ಸೋಮಶೇಖರ್ ಮಾತನಾಡಿ, 2014ರಿಂದ ಈವರೆಗೆ ಜಿಲ್ಲೆಯ ವಿವಿಧೆಡೆ 14 ಶಿಬಿರಗಳನ್ನು ಆಯೋಜಿಸಿದ್ದು, 850ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದಿದ್ದಾರೆ. ಇದೀಗ ಪಟ್ಟಣದ ಗುರುಬೂದಿ ಮಂಗಳ ಮಂಟಪದಲ್ಲಿ ಜು.1ರಿಂದ 10ರವರೆಗೆ ಶಿಬಿರ ಆಯೋಜನೆಗೊಂಡಿದ್ದು, ಈಗಾಗಲೇ 15 ಜನರು ನೋಂದಾಯಿಸಿಕೊಂಡಿದ್ದಾರೆ. ಜು.10ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದರು.

ಗಾವಡಗೆರೆ ಶ್ರೀ ಗುರುಬೂದಿ ಮಂಗಳಮಂಟಪದ ಶ್ರೀ ನಟರಾಜ ಸ್ವಾಮೀಜಿ, ಮಾದಹಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ, ಚುಂಚಹಳ್ಳಿ ಚನ್ನಬಸವ ಸ್ವಾಮೀಜಿ ಅವರು ಶಿಬಿರ ಆಯೋಜನೆ ಕುರಿತು ಸಲಹೆ ಸೂಚನೆ ನೀಡಿದರು. ಮುಖಂಡರಾದ ಬಸವರಾಜು, ತಾಲೂಕು ಬಸವ ಸಮಿತಿ ಅಧ್ಯಕ್ಷ ಕೂಸಪ್ಪ, ಶಿವಕುಮಾರ್, ಗುರುಸ್ವಾಮಿ, ವಿಷಕಂಠಪ್ಪ, ವಿಜಯಣ್ಣ, ತಾಲೂಕು ಕುರುಬ ಅಭಿವೃದ್ಧಿ ಸಮಿತಿ ಖಜಾಂಚಿ ಗಣೇಶ್ ಕುಮಾರಸ್ವಾಮಿ, ನಾಯಕ ಸಂಘದ ಅಧ್ಯಕ್ಷ ಅಣ್ಣಯ್ಯನಾಯಕ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net