

ಬೆಂಗಳೂರು: ಮೊಬೈಲ್‌ನಲ್ಲಿ ಮಾತನಾಡುವ ವಿಚಾರಕ್ಕೆ ಗಲಾಟೆಯಾಗಿ ಚಿಕ್ಕಪ್ಪನ ಮಗನನ್ನು ಮದ್ಯದ ಅಮಲಿನಲ್ಲಿ ಸಹೋದರ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.
ಜಾರ್ಖಂಡ್ ಮೂಲದ ರಾಜು ಗಾಂಜು(೩೨) ಕೊಲೆಯಾದವ. ಕೃತ್ಯ ಎಸಗಿದ ಈತನ ದೊಡ್ಡಪ್ಪನ ಮಗ ರಘು(೩೫) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಅ.೬ರಂದು ರಾತ್ರಿ ಚಿಕ್ಕಪ್ಪನ ಮಗ ರಾಜುನನ್ನು ಮೊಬೈಲ್ ವಿಚಾರಕ್ಕೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾರ್ಖಂಡ್ ಮೂಲದ ರಾಜು ಮತ್ತು ರಘು ನಾಲ್ಕೈದು ತಿಂಗಳ ಹಿಂದೆ ನಗರಕ್ಕೆ ಬಂದಿದ್ದು, ಅಮೃತಹಳ್ಳಿಯ ವೀರಣ್ಣಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿಯೇ ಇರುವ ಕಾರ್ಮಿಕರ ಶೆಡ್‌ನಲ್ಲಿ ವಾಸವಾಗಿದ್ದರು. ಇಬ್ಬರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಸೋಮವಾರ ರಾತ್ರಿ ಇಬ್ಬರು ಮದ್ಯ ಸೇವಿಸಿದ್ದು, ಈ ವೇಳೆ ರಾಜು, ರಘುಗೆ ಊರಿನಲ್ಲಿರುವ ಸಂಬಂಧಿ ಜತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಬಗ್ಗೆ ಕೇಳಿದ್ದಾನೆ. ಅಲ್ಲದೆ, ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾನೆ. ಅದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಅದು ವಿಕೋಪಕ್ಕೆ ಹೋದಾಗ ಚಾಕುವಿನಿಂದ ರಘು, ರಾಜುವಿನ ಕುತ್ತಿಗೆ, ಹೊಟ್ಟೆ ಭಾಗಕ್ಕೆ ಇರಿದು ಹತ್ಯೆಗೈದಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿ ಪೊಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.