

ಶಿವಮೊಗ್ಗ: ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಗುಂಪೊಂದು ಮದ್ಯದ ಅಮಲಿನಲ್ಲಿ ತೂರಾಡಿರುವ ವಿಡಿಯೋ ವೈರಲ್ ಆಗಿದೆ. ಕಾಲೇಜು ಮುಂಭಾಗವೇ ಘಟನೆ ನಡೆದಿದ್ದು, ಬಸ್‌ನಲ್ಲಿದ್ದ ಇತರೆ ವಿದ್ಯಾರ್ಥಿಗಳೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಘಟನೆ ನಡೆದಿದ್ದು ಯಾವಾಗ ? ಎಂಬುದು ಸ್ಪಷ್ಟವಾಗಿಲ್ಲ. ಆದರೆ ಸೋಮವಾರ ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಮದ್ಯ ಸೇವಿಸಿದ್ದ ವಿದ್ಯಾರ್ಥಿಗಳು ಕಾಲೇಜಿನ ಬಸ್ ಹತ್ತಲು ಮುಂದಾಗಿದ್ದು ತಡೆದ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ.
ಕಾಲೇಜು ಮುಂಭಾಗ ವಿದ್ಯಾರ್ಥಿಗಳು ಅಮಲಿನಲ್ಲಿರುವುದನ್ನು ನೋಡಿದ ಭದ್ರತಾ ಸಿಬ್ಬಂದಿ ಮತ್ತು ಇತರೆ ವಿದ್ಯಾರ್ಥಿಗಳು ಗಾಂಜಾ ಸೇವನೆ ಮಾಡಿದ್ದಾರೆಂದೇ ಭಾವಿಸಿದ್ದಾರೆ. ತಕ್ಷಣವೇ ಭದ್ರತಾ ಸಿಬ್ಬಂದಿ ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ವಿದ್ಯಾರ್ಥಿಗಳ ಪಾಲಕರನ್ನು ಕಾಲೇಜಿಗೆ ಕರೆಯಿಸಿ ಬುದ್ದಿವಾದದ ಜತೆಗೆ ಎಚ್ಚರಿಕೆಯನ್ನೂ ನೀಡಲಾಗಿದೆ.
ಅಮಲೀನಲ್ಲಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಾಥಮಿಕ ತನಿಖೆ ನಡೆಸಿದಾಗ ವಿದ್ಯಾರ್ಥಿಗಳು ಮದ್ಯ ಸೇವಿಸಿ ಅವಾಂತರ ಸೃಷ್ಟಿಸಿದ್ದರು ಎಂಬುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ಸಾಗರ ರಸ್ತೆಯ ಬಾರ್‌ವೊಂದರಲ್ಲಿ ಮದ್ಯಸೇವನೆ ಮಾಡಿ ಬಸ್ ಹತ್ತಲು ಕಾಲೇಜಿನ ಹತ್ತಿರ ಬಂದಾಗ ಗೇಟ್‌ನಲ್ಲಿ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಅವರ ಪಾಲಕರಿಗೆ ವಿಚಾರ ತಿಳಿಸಿ ಆಡಳಿತ ಮಂಡಳಿ ಸಮಾಲೋಚನೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ವಿಡಿಯೋ ಅವಾಂತರ ?
ಅಮಲಿನಲ್ಲಿದ್ದ ಮೂರ್ನಾಲ್ಕು ವಿದ್ಯಾರ್ಥಿಗಳು ಕಾಲೇಜು ಎದುರೇ ತೂರಾಡುತ್ತಿರುವ ವಿಡಿಯೋ ಇದಾಗಿದೆ. ಕಾಲೇಜು ಬಸ್‌ನಲ್ಲಿದ್ದ ಕೆಲವರು ವಿಡಿಯೋ ಮಾಡಿದ್ದಾರೆ. ಅದರಲ್ಲಿ ವಿದ್ಯಾರ್ಥಿಯೊಬ್ಬ ಕಾಲೇಜು ಸಮವಸ್ತ್ರದಲ್ಲೇ ಮುಖ ಕೆಳಗೆ ಮಾಡಿ ಬಿದ್ದಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿ ತಲೆ ಬಗ್ಗಿಸಿದ್ದಾನೆ. ಇನ್ನೊಬ್ಬ ತೂರಾಡಿಕೊಂಡು ಓಡಾಡುತ್ತಿರುವ ವಿಡಿಯೋ ಇದಾಗಿದೆ. ತಲೆ ಕೆಳಗೆ ಹಾಕಿ ಕುಳಿತಿದ್ದ ವಿದ್ಯಾರ್ಥಿ ದಿಢೀರ್ ಎದ್ದು ಮುಂದಕ್ಕೆ ಹೋಗಿ ನಿಲ್ಲುವುದಕ್ಕೂ ಆಗದೇ ಬೀಳುತ್ತಾನೆ. ಅಲ್ಲಿಗೆ ಬಂದ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳನ್ನು ತಡೆದು ನಿಲ್ಲಿಸುತ್ತಾರೆ. ಅದರೆ ಅವರ ಮಾತು ಕೇಳದೆ ತೂರಾಡುತ್ತಲೆ ವಿದ್ಯಾರ್ಥಿ ಓಡಲು ಯತ್ನಿಸುತ್ತಾನೆ.