

ಚಿಕ್ಕೋಡಿ: ಆಡಳಿತ ದೃಷ್ಟಿಯಿಂದ ರಾಜ್ಯದ ಎರಡನೇ ದೊಡ್ಡ ಜಿಲ್ಲೆ ಬೆಳಗಾವಿಯನ್ನು ವಿಭಜಿಸಿ ಚಿಕ್ಕೋಡಿ, ಗೋಕಾಕ, ಅಥಣಿ ಮತ್ತು ಬೈಲಹೊಂಗಲ ಹೊಸ ಜಿಲ್ಲೆ ರಚಿಸುವಂತೆ ಆಗ್ರಹಿಸಿದ್ದ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ಜೀವಕಳೆ ಬಂದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಜಿಲ್ಲೆ ರಚನೆ ಕುರಿತು ಈಚೆಗೆ ಮಾಧ್ಯಮದ ಜತೆ ಮಾತನಾಡಿದ್ದು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ರಚಿಸುವ ಬೇಡಿಕೆಯಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಶಾಸಕರು, ಸಂಸದರು, ಜನಪ್ರತಿನಿಧಿಗಳ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಚಿಕ್ಕೋಡಿ ಜಿಲ್ಲೆಯನ್ನು ಘೋಷಣೆ ಮಾಡುವಂತೆ ದಿ.ಬಿ.ಆರ್.ಸಂಗಪ್ಪಗೋಳ ಅವರ ನೇತೃತ್ವದಲ್ಲಿ ಮಾಜಿ ಶಾಸಕ ಬಾಳಾಸಾಹೇಬ ವಡ್ಡರ ಸೇರಿ ಜಿಲ್ಲೆ ವಿಭಜನೆಗಾಗಿ ಸಾವಿರಾರು ಜನರು ಹೋರಾಟ ಮಾಡುತ್ತಾ ಬಂದಿದ್ದರು. ಸಿಎಂ ಮಾತಿನ ಬೆನ್ನಲ್ಲೇ ಇಷ್ಟು ವರ್ಷಗಳ ಹೋರಾಟಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.