ಮತದಾನದಲ್ಲಿ ಪೋಷಕರು ಪಾಲ್ಗೊಳ್ಳಲು ಕೋರಿ ವಿದ್ಯಾರ್ಥಿಗಳಿಂದ ಪತ್ರ / ಚಿನ್ಮಯ ಶಾಲೆಯ ವಿದ್ಯಾರ್ಥಿಗಳಿಂದ ವಿನೂತನ ಸ್ವೀಪ್ ಕಾರ್ಯಕ್ರಮ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಂಡು ಮತ ಚಲಾಯಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಸಮಿತಿಯಿಂದ ವಿಭಿನ್ನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶಾಲಾ ವಿದ್ಯಾರ್ಥಿಗಳು ಪೋಷಕರಿಗೆ ಪತ್ರ ಬರೆದು ಮತದಾನ ನಿಮ್ಮ ಹಕ್ಕು ಆಗಿದೆ. ಹಣ ಹಾಗೂ ಆಮೀಶಗಳನ್ನು ತಿರಸ್ಕರಿಸಿ ನೈತಿಕ ಮತದಾನ ಮಾಡಿ. ನಿಮ್ಮ ಮತ ನಿಮ್ಮ ಹಕ್ಕು. ಆ ಹಕ್ಕನ್ನು ಚಲಾಯಿಸುವುದು. ನಿಮ್ಮ ನೈತಿಕ ಕರ್ತವ್ಯವೆಂಬ ಘೋಷವಾಕ್ಯದೊಂದಿಗೆ ಪೋಷಕರು ಮತದಾನದಲ್ಲಿ ಭಾಗವಹಿಸಿ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ಕೋರಿ. ವಿದ್ಯಾರ್ಥಿಗಳು ಪತ್ರ ಚಳವಳಿ ಆರಂಭಿಸಿದ್ದಾರೆ.

ಕೋಲಾರ ತಾಲ್ಲೂಕಿನ ಚೊಕ್ಕಹಳ್ಳಿ ಚಿನ್ಮಯ ಗ್ರಾಮೀಣ ವಿದ್ಯಾಲಯದಲ್ಲಿ ಶನಿವಾರ ಮತದಾರರ ಸಾಕ್ಷರತ ಕ್ಲಬ್ ಮೂಲಕ ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಉತ್ತಮ ಜನಪ್ರತಿನಿಧಿಯ ಆಯ್ಕೆ ಬಗ್ಗೆ ಅರಿವು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ನಡೆಸಲಾಯಿತು.

ವಿದ್ಯಾರ್ಥಿಗಳು ಗ್ರಾಮಗಳಿಗೆ ತೆರಳಿ ಜಾಥಾಗಳನ್ನು ನಡೆಸಿದ್ದಾರೆ. ಆ ಮೂಲಕ ಮತದಾರರಿಗೆ ಜಾಗೃತಿ ಮೂಡಿಸಲಾಗಿದೆ. ಕೋಲಾರದ ಸ್ವೀಪ್ ಸಮಿತಿ ಮತ್ತು ಚೊಕ್ಕಹಳ್ಳಿ ಗ್ರಾಮೀಣ ವಿದ್ಯಾಲಯದ ಮತದಾರರ ಸಾಕ್ಷರತ ಕ್ಲಬ್ ಆಶ್ರಯದಲ್ಲಿ ವಿದ್ಯಾರ್ಥಿಗಳು ಪೋಷಕರಿಗೆ ಪತ್ರ ಬರೆದರು. ಪತ್ರ ಬರೆಯುವ ಚಳವಳಿಯಲ್ಲಿ ಶಾಲೆಯ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತೀರ್ಥರೂಪರಾದ ತಂದೆ-ತಾಯಿಗಳಿಗೆ ನಿಮ್ಮ ಮಗ-ಮಗಳು ಆಮೂಲ್ಯ ಮಾಡುವ ನಮಸ್ಕಾರಗಳು ಏಪ್ರಿಲ್ ೨೬ ರಂದು ಕೋಲಾರ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಅಂದು ನೀವು ಮತದಾನದಲ್ಲಿ ಭಾಗವಹಿಸಿ. ಉಡುಗೋರೆಗಳು ಮತ್ತು ಆಮೀಶಗಳನ್ನು ತಿರಸ್ಕರಿಸಿ ನಿಮ್ಮ ಮತವನ್ನು ಚಲಾಯಿಸಿ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿಯೆಂಬ ಒಕ್ಕಣೆಯೊಂದಿಗೆ ವಿದ್ಯಾರ್ಥಿಗಳು ಪತ್ರಗಳನ್ನು ಬರೆದರು. ವಿದ್ಯಾರ್ಥಿಗಳು ಬರೆದ ಪತ್ರಗಳನ್ನು ಶಾಲೆಯ ಉಪಾದ್ಯಾಯರು ಸಂಗ್ರಹಿಸಿ ಅಂಚೆ ಕಛೇರಿಗೆ ತಲುಪಿಸಿದರು.

ವಿದ್ಯಾರ್ಥಿಗಳು ಪತ್ರ ಬರೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ. ಶಿವಕುಮಾರ್, ನಿಮ್ಮ ಪೋಷಕರು ಅಂದು ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿ ಅವರಿಗೆ ಹೇಳಿ ಮತದಾನದಲ್ಲಿ ಎಲ್ಲರೂ ಭಾಗವಹಿಸಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಸದೃಡಗೊಳಿಸಬೇಕು. ಮುಂದೆ ನಿಮಗೆ ಮತದಾನದ ಹಕ್ಕು ದೊರೆತಾಗ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಗೋವಿಂದಗೌಡ ಮಾತನಾಡಿ, ಪ್ರತಿಯೊಬ್ಬರು ಮತದಾನಲ್ಲಿ ಭಾಗವಹಿಸಬೇಕು. ಅಂದು ನಿಮ್ಮ ಪೋಷಕರು ಮತ ಚಲಾಯಿಸುವಂತೆ ಅವರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಶಾಲಾ ಮುಖ್ಯೋಪಾದ್ಯಯ ದ್ವಾರಕನಾಥ್ ಮಾತನಾಡಿ, ನಮ್ಮ ಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಕಾರ್ಯನಿರ್ವಹಿಸುತ್ತಿದೆ. ಈ ಕ್ಲಬ್ ಮೂಲಕ ವಿದ್ಯಾರ್ಥಿಗಳಿಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು, ನಮ್ಮ ಶಾಲೆಯ ಕ್ಲಬ್ ರಾಜ್ಯದಲ್ಲಿ ಅತ್ಯುತ್ತಮ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲನೇಯ ಸ್ಥಾನ ಪಡೆದಿದ್ದು, ರಾಜ್ಯ ಚುನಾವಣೆ ಆಯೋಗ ಶ್ಲಾಘಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎನ್. ರವಿಚಂದ್ರ, ಜಿಲ್ಲಾ ಪಂಚಾಯಿತಿಯ ಸಿಬ್ಬಂದಿ ಜಗದೀಶ್, ಆನಂದ್ ಹಾಗೂ ಕಾರ್ಯಕ್ರಮದ ಸಂಯೋಜಕ ಚಿನ್ಮಯ ಶಾಲೆಯ ಶಿಕ್ಷಕ ಲೋಕೆಶ್ ಭಾಗವಹಿಸಿದ್ದರು.

ಚಿತ್ರ ೩೧ ಕೆ.ಎಲ್.ಆರ್. ೦೩ : ತಾಲ್ಲೂಕಿನ ಚೊಕ್ಕಹಳ್ಳಿ ಚಿನ್ಮಯ ವಿದ್ಯಾಲಯದಲ್ಲಿ ಮಕ್ಕಳಿಂದ ಪೋಷಕರಿಗೆ ಪತ್ರ ಬರೆದು ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತ ಚಲಾಯಿಸುವಂತೆ ಪತ್ರ ಚಳುವಳಿ ನಡೆಸಲಾಯಿತು.
ಚಿತ್ರ ೩೧ ಕೆ.ಎಲ್.ಆರ್. ೦೩ಎ : ಪೋಷಕರಿಗೆ ಬರೆದ ಪತ್ರವನ್ನು ಪ್ರದರ್ಶಿಸುತ್ತಿರುವ ವಿದ್ಯಾರ್ಥಿಗಳು
ಚಿತ್ರ ೩೧ ಕೆ.ಎಲ್.ಆರ್. ೦೩ಬಿ : ವಿದ್ಯಾರ್ಥಿಗಳು ಬರೆದ ಪತ್ರದ ಸಾರಾಂಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net