

ಕೊಪ್ಪ: ಮತಗಳ್ಳತನ ವಿರುದ್ಧ ತೀವ್ರ ಹೋರಾಟ ನಡೆಸದಿದ್ದರೆ ಪ್ರಜಾಪ್ರಭುತ್ವ ನಾಶ ಆಗುವುದು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ದಂಡಿನಮಕ್ಕಿ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಶೃಂಗೇರಿ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ, ಕೊಪ್ಪ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಮತಗಳ್ಳತನದ ವಿರುದ್ಧ ಜನಜಾಗೃತಿ ಅಭಿಯಾನದ ಸಹಿ ಸಂಗ್ರಹ ಮತ್ತು ಪ್ರತಿಭಟನೆಯಲ್ಲಿ ಮಾತನಾಡಿದರು. ಹೋಬಳಿ, ಬೂತ್ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಮತಗಳ್ಳತನ ವಿರುದ್ಧ ರಾಹುಲ್ ಗಾಂಧಿ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಕೆಡಿಪಿ ಸದಸ್ಯ ರಾಜಶಂಕರ್ ಮಾತನಾಡಿ, ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಬೇಕು. ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಡಬೇಕು. ಮತಗಳ್ಳತನ ಹೋಗಲಾಡಿಸಲು ಎಲ್ಲರೂ ಒಗ್ಗೂಡಬೇಕು ಎಂದರು.
ಮುಖಂಡ ನವೀನ್ ಕರುವಾನೆ ಮಾತನಾಡಿ, ಬಿಜೆಪಿಗರು ಅಧಿಕಾರಕ್ಕಾಗಿ ಮತಗಳ್ಳತನ ಮಾಡಿದ್ದಾರೆ. ಇಂದಿರಾಗಾಂಧಿ, ನೆಹರು ಪ್ರಧಾನಿಯಾಗಿದ್ದಾಗ ಭಾರತಕ್ಕೆ ಭದ್ರತೆ ಇತ್ತು. ಈಗ ಭದ್ರತೆ ಇಲ್ಲ. ಬಿಜೆಪಿಗರು ಮತಗಳ್ಳತನದಿಂದ ಗೆದ್ದಿದಾರೆ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನುಗ್ಗಿ ಮಂಜುನಾಥ್ ಮಾತನಾಡಿ, ನೋಟು ಅಮಾನ್ಯದಿಂದ ಜನಸಾಮಾನ್ಯರು ಸಮಸ್ಯೆ ಎದುರಿಸಿದರು. ಆದರೆ ಮಾಧ್ಯಮಗಳು ನರೇಂದ್ರ ಮೋದಿ, ಬಿಜೆಪಿ ಪರವಾಗಿ ನಿಂತವು. ಬಿಜೆಪಿ ನಿರೀಕ್ಷೆಗೂ ಮೀರಿ ಗೆಲುವು ಸಾಧ್ಯವಾಗಿದ್ದು ಮತಗಳ್ಳತನದಿಂದ. ನರೇಂದ್ರ ಮೋದಿ, ಚುನಾವಣಾ ಆಯೋಗದವರು ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಹೆದರುತ್ತಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧ ಡಿ.ಎನ್.ಜೀವರಾಜ್ ಅವರ ಷಡ್ಯಂತ್ರದ ಒಂದೊಂದೇ ಮೆಟ್ಟಿಲು ಕಳಚಿ ಬೀಳುವ ಕಾಲ ದೂರವಿಲ್ಲ ಎಂದರು.
ಶೃಂಗೇರಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾಚರಣ್, ಕಾರ್ಯದರ್ಶಿ ಕಾರ್ತಿಕ್ ಕಾರ್ಗದ್ದೆ, ವಿಜಯಾನಂದ, ಮೊಹಮ್ಮದ್ ತಯೀಬ್, ನವೀನ್ ಮಾವಿನಕಟ್ಟೆ, ಓಣಿತೋಟ ರತ್ನಾಕರ್, ಪ್ರಶಾಂತ್, ನಿಸಾರ್ ನಾರ್ವೆ, ಸಂತೋಷ್ ಕುಲಾಸೋ, ವಿಜಯಕುಮಾರ್, ಮೈತ್ರಾ ಗಣೇಶ್, ಸಂದೇಶ್, ಸುಮಾ, ಸಿ.ಕೆ.ಮಾಲತಿ ಇತರರಿದ್ದರು.