ಮತ ಖರೀದಿಸುವವರನ್ನು ಬಹಿಷ್ಕರಿಸಿ: ಸುಪ್ರೀಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಸಲಹೆ

06-kolar 7
ಕೋಲಾರದಲ್ಲಿ ಸ್ವಾಭಿಮಾನಿ ಕೋಲಾರ ಆಂದೋಲನಕ್ಕೆ ಸುಪ್ರೀಂ ಕೋರ್ಟ್​ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಚಾಲನೆ ನೀಡಿದರು. ಜನವಾದಿ ವಿ.ಗೀತಾ, ಡಾ.ಉದಯಕುಮಾರ್​, ಜೆಪಿ ವೇದಿಕೆ ದಯಾನಂದ್​ ಇತರರು ಇದ್ದರು.
Published on

ಕೋಲಾರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರನ್ನು ಹಣಕ್ಕೆ ಕೊಂಡುಕೊಳ್ಳುವವರನ್ನು ಚುನಾವಣೆ ವ್ಯವಸ್ಥೆಯಿಂದ ಬಹಿಷ್ಕರಿಸುವಂತಹ ಆಂದೋಲನವನ್ನು ಕೋಲಾರದಿಂದ ಆರಂಭಗೊಳಿಸಿ ದೇಶಾದ್ಯಂತ ಮಾಡಬೇಕಾಗಿದೆ ಎಂದು ಸುಪ್ರೀಂಕೋರ್ಟ್​ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.


ನಗರ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಸ್ವಾಭಿಮಾನಿ ಕೋಲಾರ ಆಂದೋಲನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಚುನಾವಣೆ ವ್ಯವಸ್ಥೆಯಲ್ಲಿ ಮತಗಳನ್ನು ಸರಕು ಮಾಡಿಕೊಂಡು ಜನರಿಗೆ ಹಣ ಹಂಚಿ ಖರೀದಿಸುತ್ತಿರುವ ರಾಜಕಾರಣಿಗಳು ಗೆದ್ದ ಮೇಲೆ ಅಭಿವೃದ್ಧಿ ಕೆಲಸಗಳಲ್ಲಿ ಪರ್ಸೆಂಟೇಜ್​ ರೂಪದಲ್ಲಿ ವಸೂಲಿ ಮಾಡುತ್ತಿದ್ದಾರೆ. ಭ್ರಷ್ಟಾಚಾರ ರಹಿತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ದೇಶದಲ್ಲಿ ಕೆಲವು ಪಕ್ಷಗಳು ಅಧಿಕಾರದ ಆಸೆಗಾಗಿ ಇ.ಡಿ. ಪ್ರಕರಣದ ಬೆದರಿಕೆ ಹಾಕಿ ಶಾಸಕರನ್ನು ಸೆಳೆದು, ಕಾನೂನುಬದ್ಧವಾಗಿ ರಚನೆಯಾಗಿರುವ ಸರ್ಕಾರ ಬೀಳಿಸುವ ಹೊಸ ವ್ಯವಸ್ಥೆ ದೇಶದಲ್ಲಿ ಬಂದಿದೆ. ಗ್ರಾಪಂ ಚುನಾವಣೆ ಗೆಲ್ಲಲು ಅಭ್ಯರ್ಥಿಯೊಬ್ಬ ಕನಿಷ್ಠ 10 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ಖರ್ಚು ಮಾಡುತ್ತಿದ್ದಾನೆ. ಕಾರ್ಪೊರೇಟರ್​ ಆಗಲು 20 ಕೋಟಿ ರೂ. ಖರ್ಚು ಮಾಡುತ್ತಾರೆ. ಎಲ್ಲ ಹಂತಗಳಲ್ಲೂ ಎಲ್ಲ ರಾಜಕೀಯ ಪಕ್ಷಗಳು ಹಣ ನೀಡುತ್ತಿದ್ದು, ಜತೆಗೆ ಹಲವು ಆಸೆ ಆಮಿಷಗಳಿಗೆ ಮತ ಖರೀದಿಸುತ್ತಿದ್ದಾರೆ. ಅಷ್ಟು ಹಣ ಚೆಲ್ಲಿ ಗೆದ್ದ ಮೇಲೆ ಸರ್ಕಾರದ ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಶೇ.10 ರಿಂದ ಶೇ.40 ಪರ್ಸೆಂಟೇಜ್​ ಪಡೆಯುತ್ತಾರೆ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಹೇಳಿದ್ದಾರೆ ಎಂದರು.


ರಾಜ್ಯದಲ್ಲಿ ವರ್ಗಾವಣೆಯಲ್ಲಂತೂ ಕೋಟ್ಯಂತರ ರೂಪಾಯಿ ಹರಿದಾಡುತ್ತಿದೆ. ಎಸಿಪಿ, ಎಸ್​ಐ, ತಹಸೀಲ್ದಾರ್​, ಉಪನೋಂದಣಾಧಿಕಾರಿ, ಜಿಲ್ಲಾಧಿಕಾರಿಗಳು ಸಹ ಶಾಸಕರಿಗೆ, ಮಂತ್ರಿಗಳಿಗೆ ಕೋಟ್ಯಂತರ ಹಣ ನೀಡಿ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಅಧಿಕಾರಿಗಳು ಜನರಿಂದ ಹಣ ಹೀರುತ್ತಾರೆ. ಇಡೀ ಸಮಾಜ ಲಂಚಮಯವಾಗಿದೆ. ಜೈಲಿನಲ್ಲಿರಬೇಕಾದವರು ಹೊರಗಿದ್ದಾರೆ. ಖುಲಾಸೆ ಆಗಬೇಕಾದವರು ಜೈಲಿನಲ್ಲಿದ್ದಾರೆ. ಇದು ನಮ್ಮ ಸಮಾಜದ ನಿಜವಾದ ವ್ಯವಸ್ಥೆ ಎಂದರು.


ಸಂಸತ್ತಿನಲ್ಲಿ ಹಾಗೂ ಶಾಸಕಾಂಗ ವ್ಯವಸ್ಥೆಯಲ್ಲಿ ರಿಯಲ್​ ಎಸ್ಟೇಟ್​ ಏಜೆಂಟ್​ಗಳು, ಕೈಗಾರಿಕೋದ್ಯಮಿಗಳು ಚುನಾವಣೆಗೆ ನಿಂತು ಗೆಲ್ಲುತ್ತಿದ್ದಾರೆ. ಅವರಿಗೆ ಜನಸಾಮಾನ್ಯರ ಮೇಲೆ ಕಾಳಜಿ ಬರಲು ಹೇಗೆ ಸಾಧ್ಯ? ಸರ್ಕಾರ ಮಾಡಬೇಕಾದ ಕೆಲಸಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತಿದೆ. ಹೀಗಾಗಿ, ಖಾಸಗಿ ಶಾಲೆ, ಖಾಸಗಿ ಆಸ್ಪತ್ರೆ ಹೆಚ್ಚುತ್ತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 20 ಸಾವಿರ ರ್ಖಚಾದರೆ, ಅದೇ ಸಮಸ್ಯೆಗೆ ಖಾಸಗಿ ಆಸ್ಪತ್ರೆಯಲ್ಲಿ 5 ಲಕ್ಷ ವಸೂಲಿ ಮಾಡುತ್ತಾರೆ ಎಂದು ಟೀಕಿಸಿದರು.


ಸಮಾನ ಮನಸ್ಕರ ಸಂಘಟನೆಯ ಮುಖಂಡ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಸ್ವಾಭಿಮಾನಿ ಕೋಲಾರ ಆಂದೋಲನದ ಮೂಲಕ ಭ್ರಷ್ಟರಹಿತವಾದ ಚುನಾವಣಾ ವ್ಯವಸ್ಥೆ ಬೇಕೆಂಬ ಕೂಗು ಕೋಲಾರದಿಂದಲೇ ಆರಂಭವಾಗುತ್ತಿರುವುದಕ್ಕೆ ಕಾರಣ ಕೋಲಾರದ ಜನ ಮೂಲತಃ ಸ್ವಾಭಿಮಾನಿಗಳಾಗಿರುವುದೇ ಆಗಿದೆ ಎಂದರು.


ಮುಖಂಡರಾದ ಶ್ರೀಕೃಷ್ಣ, ಜನವಾದಿ ವಿ.ಗೀತಾ, ಡಾ.ಉದಯಕುಮಾರ್​, ಜೆಪಿ ವೇದಿಕೆ ದಯಾನಂದ್​, ಪತ್ರಕರ್ತ ಕೆ.ಎಸ್​ ಗಣೇಶ್​, ರೆಡ್​ಕ್ರಾಸ್​ ಚೇರ್ಮನ್​ ಗೋಪಾಲಕೃಷ್ಣ, ನಗರಸಭೆ ಮಾಜಿ ಸದಸ್ಯ ಸಲ್ಲಾವುದ್ದೀನ್​ ಬಾಬು, ಅಬ್ಬಣಿ ಶಿವಪ್ಪ, ಗಾಂಧಿನಗರ ನಾರಾಯಣಸ್ವಾಮಿ, ಟಿ.ವಿಜಿಕುಮಾರ್​, ವಕೀಲ ಸತೀಶ್​ ಮತ್ತಿತರರು ಇದ್ದರು.

ಈಗ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕುವ ಹಂತಕ್ಕೆ ವ್ಯವಸ್ಥೆ ಬಂದು ನಿಂತಿದೆ. ಆದರೆ, ನ್ಯಾಯಮೂರ್ತಿಗಳು ಇದಕ್ಕೆ ಹೆದರಲ್ಲ. ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲದ ರೀತಿಯಲ್ಲಿ ಚುನಾವಣಾ ಆಯೋಗವು ಚುನಾವಣೆ ನಡೆಸಬೇಕು. ಅದು ಸಂಪೂರ್ಣವಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರ ಎಸಗಿರುವುದು ಗೊತ್ತಾದರೆ ಚಾಲ್ತಿಯಲ್ಲಿರುವ ಕಾಯ್ದೆ ಬಳಸಿಕೊಂಡು ಜನಪ್ರತಿನಿಧಿಗಳನ್ನು ಅನರ್ಹಗೊಳಿಸಬೇಕು. ಕೋಲಾರದಿಂದ ಆರಂಭವಾಗುತ್ತಿರುವ ವಿಶಿಷ್ಟವಾದ ಈ ಆಂದೋಲನಕ್ಕೆ ನಿರಂತರವಾಗಿ ಬೆಂಬಲಿಸುತ್ತೇನೆ.

|ವಿ.ಗೋಪಾಲಗೌಡ, ಸುಪ್ರೀಂಕೋರ್ಟ್​ ನಿವೃತ್ತ ನ್ಯಾಯಮೂರ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net