

ಎಂ.ಎಸ್.ಹಿರೇಮಠ ಬೆಳಗಾವಿ
ಒಂದೆಡೆ ಪ್ರಕೃತಿಯ ರಕ್ಷಣೆ, ಮತ್ತೊಂದೆಡೆ ಸಂಸ್ಕೃತಿಯ ಸಂವರ್ಧನೆ ಈ ಎರಡನ್ನೂ ಒಟ್ಟಿಗೆ ಸಾಗಿಸುತ್ತಿರುವ ಪ್ರಯತ್ನ ಮಣ್ಣಿನ ಗಣಪತಿ ಮೂರ್ತಿ ರೂಪಿಸುವ ಮೂಲಕ ನಡೆಯುತ್ತಿದೆ. ಹೀಗಾಗಿ, ಪರಿಸರ ಸ್ನೇಹಿ ಗಣಪತಿ ಮೂರ್ತಿಗಳಿಗೆ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರ ಪ್ರಸಿದ್ಧಿ.
65-70 ವರ್ಷಗಳ ಹಿಂದೆ ಗ್ರಾಮದಲ್ಲಿ ಶಂಕ್ರಪ್ಪ ಕುಂಬಾರ, ಕಾಡಪ್ಪ ಕುಂಬಾರ ಗಣಪತಿ ತಯಾರಿಕೆ ಆರಂಭಿಸಿದ್ದರು. 1962-63ರಲ್ಲಿ ದಿ.ಕಾಡಸಿದ್ದೇಶ್ವರ ಇಟ್ಟಿಗೆ ಮತ್ತು ಕುಂಬಾರಿಕೆ ಸಾಮಾನುಗಳ ಉತ್ಪಾದಕ ಸಹಕಾರಿ ಸಂಘ ಹುಟ್ಟು ಹಾಕಿದರು. ತಾವು ತಯಾರಿಸಿದ ಗಡಿಗೆ, ಇಟ್ಟಿಗೆ, ಹೆಂಚು ಹಾಗೂ ಒಲೆ ಸೇರಿ ಇತರ ಮಣ್ಣಿನ ಸಾಮಗ್ರಿಗಳನ್ನು ಸಂಘದ ಮೂಲಕ ಮಾರಾಟ ಮಾಡಲಾರಂಭಿಸಿದರು. ಕಾಲಕ್ರಮೇಣ ಬಹುತೇಕ ಕುಂಬಾರ ಕುಟುಂಬಗಳು ಗಣಪತಿ ತಯಾರಿಕೆಯನ್ನೇ ಮೂಲ ವೃತ್ತಿಯಾಗಿಸಿಕೊಂಡಿವೆ.
ತಗ್ಗಿದ ಪಿಒಪಿ ಅಬ್ಬರ: ಕೆಲ ವರ್ಷಗಳ ಹಿಂದೆ ಪ್ಲಾಸ್ಟರ್ ಆ್ ಪ್ಯಾರಿಸ್ (ಪಿಒಪಿ) ಅಬ್ಬರ ಜೋರಾಗಿತ್ತು. ಈ ಮೂರ್ತಿಗಳು ನದಿ, ನೀರಿನ ಮೂಲಗಳಿಗೆ ಹಾನಿ ಉಂಟು ಮಾಡುತ್ತವೆ ಎಂಬ ತಿಳಿವಳಿಕೆಯಿಂದ ಈಗ ಪರಿಸರ ರಕ್ಷಣೆಯತ್ತ ಗಮನ ಹರಿಸಿ ಮಣ್ಣಿನ ಗಣಪತಿ ತಯಾರಿಕೆಯತ್ತ ಮುಖಮಾಡಿದ್ದಾರೆ. ಮಣ್ಣಿನಿಂದ ಮೂರ್ತಿ ರೂಪಿಸಲು ಹೆಚ್ಚು ಸಮಯ, ಶ್ರಮ ಮತ್ತು ನೈಪುಣ್ಯ ಬೇಕು. ಆದರೂ ಇದನ್ನು ಸಮಾಜ ಮತ್ತು ಭೂಮಿಗೆ ಕೊಡುಗೆ ಎನ್ನುವ ಭಾವನೆ ಕಲಾವಿದರಲ್ಲಿ ಮೂಡಿದಿದೆ.
ಪ್ರತಿ ವರ್ಷ ಐದು ಲಕ್ಷ ಮೂರ್ತಿ: ಪರಂಪರಾಗತವಾಗಿ ಕುಂಬಾರ ಮನೆತನದ ಶಂಕರ ಕುಂಬಾರ, ಗೋಪಾಲ ಕುಂಬಾರ, ಸುರೇಶ ಕುಂಬಾರ, ಅಡಿವೆಪ್ಪ ಕುಂಬಾರ, ಬಸವರಾಜ ಕುಂಬಾರ, ಯಮನಪ್ಪ ಕುಂಬಾರ ಗಣಪತಿ ತಯಾರಿಕೆ ಮುಂದುವರಿಸಿಕೊಂಡು ಬಂದಿದ್ದಾರೆ. ಇವರ ಗರಡಿಯಲ್ಲೇ ಪಳಗಿದ ಕುಶಲಕರ್ಮಿಗಳು ಇಂದು ಅದನ್ನೇ ಸ್ವಂತ ಉದ್ಯೋಗವಾಗಿಸಿಕೊಂಡಿದ್ದಾರೆ. ಗ್ರಾಮದಲ್ಲಿ 14 ಕುಂಬಾರ ಕುಟುಂಬ ಸೇರಿ ಒಟ್ಟು 18-20 ಕುಟುಂಬಗಳು ಗಣಪತಿ ತಯಾರಿಕೆಯಲ್ಲಿ ತೊಡಗಿದ್ದು, ನೂರಾರು ಕುಟುಂಬಗಳಿಗೆ ಉದ್ಯೋಗ ಲಭಿಸಿದ್ದು, ಇಲ್ಲಿ ಪ್ರತಿ ವರ್ಷ ಐದು ಲಕ್ಷ ಗಣಪತಿ ಮೂರ್ತಿ ಸಿದ್ಧವಾಗುತ್ತವೆ.
ಎಲ್ಲೆಡೆ ಬೇಡಿಕೆ: ಇಲ್ಲಿ ತಯಾರಾಗುವ ಮಣ್ಣಿನ ಗಣಪತಿ ಮೂರ್ತಿಗಳು ಗೋವಾ, ಮಹಾರಾಷ್ಟ್ರ, ಪುಣೆ, ಮುಂಬೈ, ಸೊಲ್ಲಾಪುರ, ಬೆಂಗಳೂರು, ಹುಬ್ಬಳ್ಳಿ ಸೇರಿ ವಿವಿಧ ನಗರಗಳಲ್ಲಿ ಮಾರಾಟವಾಗುತ್ತವೆ. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದ್ದು, 6 ಇಂಚಿನಿಂದ ನಾಲ್ಕೂವರೆ ಅಡಿ ಎತ್ತರದ ಗಣಪತಿ ಮೂರ್ತಿ ಮಾಡಲಾಗುತ್ತಿದೆ.
ಹಲವು ವರ್ಷಗಳಿಂದ ಕೊಣ್ಣೂರ ಗ್ರಾಮದಲ್ಲಿ ಗಣಪತಿ ತಯಾರಕರ ಬಳಿ ಕೆಲಸ ಮಾಡುತ್ತಿದ್ದೇನೆ. ಉದ್ಯೋಗ ಅರಿಸಿ ನಗರ ಪ್ರದೇಶಗಳಿಗೆ ತೆರಳುವ ಇಂದಿನ ದಿನಗಳಲ್ಲಿ ಸ್ಥಳೀಯವಾಗಿ ಗಣಪತಿ ತಯಾರಿಕೆ ದೊರೆತಿರುವುದರಿಂದ ಕುಟುಂಬ ನಿರ್ವಹಣೆಗೆ ಆಸರೆಯಾಗಿದೆ. | ಚಂದ್ರು ಗುಡ್ಡಾಕಾಯು ಕಾರ್ಮಿಕ ಪಿಒಪಿ ಗಣಪತಿ ನಿಷೇಧದಿಂದ ಮಣ್ಣಿನ ಗಣಪತಿ ಮಾಡುವ ಗ್ರಾಮೀಣ ಭಾಗದ ಕಲಾವಿದರ ಕಲೆಗೆ ಬೆಲೆ ಸಿಕ್ಕಿದೆ. ಪೂಜೆಗೆ ಮಣ್ಣಿನ ಗಣಪತಿಯೇ ಶ್ರೇಷ್ಠವಾದ್ದರಿಂದ ಪರಿಸರ ಸ್ನೇಹಿ ಗಣಪತಿಗೆ ಆದ್ಯತೆ ನೀಡಿದ್ದೇವೆ. ತಂತ್ರಜ್ಞಾನ, ಕಚ್ಚಾ ವಸ್ತು ಪೂರೈಕೆಗೆ ಸರ್ಕಾರ ಸೌಲಭ್ಯ ಒದಗಿಸಬೇಕು. | ಶಂಕರ ಕುಂಬಾರ ಅಧ್ಯಕ್ಷರು, ಕಾಡಸಿದ್ದೇಶ್ವರ ಇಟ್ಟಿಗೆ ಮತ್ತು ಕುಂಬಾರಿಕೆ ಸಾಮಾನುಗಳ ಉತ್ಪಾದಕ ಸಹಕಾರಿ ಸಂಘ, ಕೊಣ್ಣೂರ ವರ್ಷವಿಡೀ ಕೆಲಸ ನಡೆಯುವುದರಿಂದ ನೂರಾರು ಜನರಿಗೆ ಉದ್ಯೋಗ ನೀಡಿದೆ. ಪರಿಸರ ಸ್ನೇಹಿ ಗಣಪತಿ ಮೂರ್ತಿಗೆ ಬೇಡಿಕೆ ಹೆಚ್ಚಿರುವುದರಿಂದ ಪ್ರತಿ ವರ್ಷ ಬೆಂಗಳೂರು, ದಾವಣಗೆರೆ, ಗಂಗಾವತಿ ಸೇರಿ ವಿವಿಧೆಡೆ ಗಣಪತಿ ಮಾರಾಟ ಮಾಡಲಾಗುತ್ತದೆ. | ಸಾಗರ ಕುಂಬಾರ ಕಲಾವಿದ ಕೊಣ್ಣೂರ