

ಚಿಕ್ಕಮಗಳೂರು: ಮಣಿಪುರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಖಂಡಿಸಿ ದಲಿತ ಸಂಘಟನೆಗಳ ಐಕ್ಯತಾ ಚಾಲನಾ ಸಮಿತಿ ಮುಖಂಡರು ನಗರದಲ್ಲಿ ಸೋಮವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಿದರು.
ನಗರದ ಹನುಮಂತಪ್ಪ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್‌ವರೆಗೆ ಪಂಜಿನ ಮೆರವಣಿಗೆ ನಡೆಸಿ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಮಾಜದಲ್ಲಿ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ, ಶೋಷಣೆಗಳು ನಿರಂತರವಾಗಿ ನಡೆಯುತ್ತಿವೆ. ಮಣಿಪುರ ಕೃತ್ಯದಿಂದ ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಗಲ್ಲಿಗೇರಿಸಬೇಕು. ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಮತ್ತು ಮಣಿಪುರ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಸೈನಿಕನ ಪತ್ನಿ ಮೇಲೆ ಅತ್ಯಾಚಾರ ಮಾಡಿದರೂ ರಕ್ಷಣೆ ನೀಡುತ್ತಿಲ್ಲ. ಸೈನಿಕರ ಕುಟುಂಬ ರಕ್ಷಣೆ ಮಾಡಲಿಲ್ಲ ಎಂದರೆ ಆದಿವಾಸಿಗಳು, ದಲಿತರಿಗೆ ರಕ್ಷಣೆ ಹೇಗೆ. ಧರ್ಮಸ್ಥಳದಲ್ಲಿ ನಡೆದ ಹತ್ಯೆ ಪ್ರಕರಣದ ಮರುತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಮುಖಂಡರಾದ ಚಂದ್ರು, ಮರ್ಲೆ ಅಣ್ಣಯ್ಯ, ದಂಟರಮಕ್ಕಿ ಶ್ರೀನಿವಾಸ್, ಹುಣೇಸಮಕ್ಕಿ ಲಕ್ಷ್ಮಣ್, ಚಂದ್ರಶೇಖರ್, ಲಕ್ಯಾ ಸಂತೋಷ್, ಶಿವಕುಮಾರ್, ಅಂತೋಣಿಯಮ್ಮ, ನಾಗೇಶ್, ಅಶೋಕ್ ಕೂದುವಳ್ಳಿ, ಲಕ್ಷ್ಮೀಪುರ ಸಂತೋಷ್ ಇದ್ದರು.