ಮಠ, ಮಂದಿರಗಳಿಂದ ಸಮಾಜಕ್ಕೆ ಕೊಡುಗೆ

srb dharmika (3)
ಸೊರಬ ಜಡೆ ಸಂಸ್ಥಾನ ಮಠದಲ್ಲಿ ಶ್ರೀ ಕುಮಾರಕೆಂಪಿನ ಸಿದ್ಧವೃಷಭೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರವಚನ ಕಾರ್ಯಕ್ರಮವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಆನಂದಪುರ ಮುರುಘಾ ಮಠದ ಶ್ರೀಗಳು, ಮಹಾಂತ ಶ್ರೀಗಳು, ಸಿದ್ಧವೃಷಭೇಂದ್ರ ಶ್ರೀಗಳು, ತೊಗರ್ಸಿ ಚನ್ನವೀರ ದೇಶಿಕೇಂದ್ರ ಶ್ರೀ ಇತರರಿದ್ದರು.
Published on

ಸೊರಬ: ಮಠ, ಮಂದಿರಗಳು ಸಮಾಜದ ಆಸ್ತಿ. ಜಡೆ ಮಹಾ ಸಂಸ್ಥಾನ ಮಠ ಜಿಲ್ಲೆಗೆ ಅಪಾರ ಕೊಡುಗೆ ನೀಡಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ. ಮಠದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಸೊರಬ ಜಡೆ ಸಂಸ್ಥಾನ ಮಠದ ಶ್ರೀ ಜಗದ್ಗುರು ಕುಮಾರಕೆಂಪಿನ ಸಿದ್ಧವೃಷಭೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಮಂಗಳವಾರ ಮಠದ ಆವರಣದಲ್ಲಿ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣ ನೀಡುವುದು ಒಂದು ದೇವರ ಕಾರ್ಯ. ಈಗಾಗಲೇ ಶಿಕ್ಷಣ ಕಲಿಕೆಗೆ ಪೂರಕವಾಗಿ ಇಲಾಖೆಯಲ್ಲಿ ಅನೇಕ ಬದಲಾವಣೆ ಜಾರಿಗೊಳಿಸಲಾಗಿದೆ. ಹಾಗೆಯೇ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸುವ ಜತೆಗೆ ಹಿರಿಯರಿಗೆ ಗೌರವ ನೀಡುವುದನ್ನು ಕಲಿಸಬೇಕಿದೆ. ಮಕ್ಕಳನ್ನು ಕೇವಲ ಶಾಲೆಗೆ ದಾಖಲಿಸುವುದಷ್ಟೇ ಮುಖ್ಯವಲ್ಲ. ಅವರ ಮೇಲೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಮಾತನಾಡಿ, ಸಂವಿಧಾನ ಪರಿವಿಡಿಯಲ್ಲಿ ಮೂಲ ತತ್ವವನ್ನು ಸಾರುತ್ತ ಬಂದವರು ಬಸವಾದಿ ಶರಣರು. ಅಂತಹ ಮಹತ್ಕಾರ್ಯವನ್ನು ಜಡೆ ಮಹಾಸಂಸ್ಥಾನ ಮಠ ಮಾಡುತ್ತಿದೆ. ಬಸವಣ್ಣನ ತತ್ವಗಳು ಅತಿ ಹೆಚ್ಚು ಪ್ರಚಾರವಾಗಬೇಕು. ದ್ವೇಷ, ಅಸೂಯೆ ಹೋಗಲಾಡಿಸಿ ಜೀವನದಲ್ಲಿ ಬಸವ ತತ್ವಗಳನ್ನು ಅನುಸರಿಸಿದರೆ ಮಾತ್ರ ಶಾಂತಿ, ಸಮೃದ್ಧಿ ಹೊಂದಬಹುದು ಎಂದು ಹೇಳಿದರು.

ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯ ಶ್ರೀ ಗವಿಸಿದ್ದೇಶ್ವರ ಶಾಸ್ತ್ರಿಗಳು ಬೂದಿಹಾಳ ವಿಶೇಷ ಪ್ರವಚನ ನೀಡಿದರು. ಆನಂದಪುರ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ, ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಸ್ವಾಮೀಜಿ, ತೊಗರ್ಸಿ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಶಿಕಾರಿಪುರದ ಶ್ರೀ ಶಿವಬಸವ ಸ್ವಾಮೀಜಿ, ಗುತ್ತಲ ಶ್ರೀ ಪ್ರಭು ಸ್ವಾಮೀಜಿ, ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ, ಚನ್ನಗಿರಿ ಶ್ರೀ ಬಸವಜಯಚಂದ್ರ ಸ್ವಾಮೀಜಿ, ಶೀ ಚನ್ನಬಸವ ಸ್ವಾಮೀಜಿ, ಮಹಾಂತ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಶಶಿಕಲಾ ಮೂರ್ತಿ, ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ತಾಲೂಕ ಅಧ್ಯಕ್ಷ ಗುರುಕುಮಾರ ಪಾಟೀಲ್, ಎಸ್.ವಿ ಈರೇಶ್, ಸದಾನಂದ ಗೌಡ, ಶಿವಲಿಂಗೇಗೌಡ, ವಿರೇಂದ್ರ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net