

ಕಡೂರು: ತಾಲೂಕಿನ ಆಸಂಧಿ ಸಂಸ್ಥಾನದ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ವಿಶ್ವಸ್ಥ ಮಂಡಳಿಯಿಂದ ನೂತನವಾಗಿ ನಿರ್ಮಿಸುತ್ತಿರುವ ಮಠಕ್ಕೆ ಮಾರ್ಚ್ ಒಳಗೆ ಒಂದು ಕೋಟಿ ರೂ. ವಿಶೇಷ ಅನುದಾನ ದೊರಕಿಸಿಕೊಡಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಆಸಂಧಿ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ಅವರ ವಿಶೇಷ ದಸರಾ ಮಹೋತ್ಸವ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಅಂಬಿನ ಮಹೋತ್ಸವ ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಆಸಂಧಿ ಸಂಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಅತಿ ಹೆಚ್ಚು ಕುರುಬ ಸಮಾಜದ ಭಕ್ತರನ್ನು ಹೊಂದಿರುವ ಮಠ ಇದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನ ದೊರಕಿಸಲು ಪ್ರಯತ್ನಿಸಲಾಗುವುದು. ಈಗಾಗಲೇ 20 ಲಕ್ಷ ರೂ. ಅನುದಾನ ದೊರಕಿಸಲಾಗಿದೆ. ಈ ಮಹತ್ವದ ಕಾರ್ಯಕ್ಕೆ ಕುರುಬ ಸಮಾಜದ ಭಕ್ತರ ಸಹಕಾರ ಅತಿ ಅವಶ್ಯಕ ಎಂದರು.
ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಜಿ.ರೇವಣ್ಣ ಮಾತನಾಡಿ, ಆಸಂಧಿ ಸಂಸ್ಥಾನ ಚಿಕ್ಕಮಗಳೂರು, ತುಮಕೂರು, ಹಾಸನ, ಬೆಂಗಳೂರು, ಶಿವಮೊಗ್ಗ, ಕೊಡಗು, ಮೈಸೂರು, ಚಿತ್ರದುರ್ಗ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರನ್ನು ಹೊಂದಿದೆ. ಪ್ರತಿವರ್ಷ ದಸರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ಅಂಬಿನ ಮಹೋತ್ಸವದ ಸೇವೆ ವಿಶೇಷವಾಗಿ ನಡೆಯುತ್ತದೆ. ನೂತನ ಮಠದ ನಿರ್ಮಾಣಕ್ಕೆ ಸುಮಾರು 5 ಕೋಟಿ ರೂ. ವೆಚ್ಚ ವಾಗಲಿದೆ. ಭಕ್ತರಿಂದ ಸುಮಾರು ಒಂದು ಕೋಟಿ ರೂ. ದೇಣಿಗೆ ಸಂಗ್ರಹಿಸಿದ್ದು ನಾಲ್ಕು ಕೋಟಿ ರೂ. ಕೊರತೆ ಉಂಟಾಗಲಿದ್ದು ಶಾಸಕರು, ಪುರಸಭಾ ಅಧ್ಯಕ್ಷರು ಹೆಚ್ಚಿನ ಸಹಕಾರ ನೀಡಬೇಕಿದೆ. ಮಠದ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದರು.
ಗ್ರಾಮದ ದಸರಾ ಬಯಲಿನಲ್ಲಿ ಆಯೋಜನೆಗೊಂಡಿದ್ದ ಅಂಬಿನ ಮಹೋತ್ಸವವನ್ನು ಬಂದೂಕಿನ ಮೂಲಕ ಸಾಂಪ್ರದಾಯಿಕ ಅಂಬು ಹೊಡೆಯಲಾಯಿತು. ಬಳಿಕ ಸಾವಿರಾರು ಕುರಿಮರಿಗಳನ್ನು ಅಂಬಿನ ಸುತ್ತ ಮೂರು ಬಾರಿ ಪ್ರದಕ್ಷಿಣೆ ಮಾಡಿಸಲಾಯಿತು. ನಂತರ ಗುರು ರೇವಣಸಿದ್ದೇಶ್ವರ ಸ್ವಾಮಿಯ ಜಯಘೋಷಗಳು ಮೊಳಗಿದವು. ವಿಶ್ವಸ್ಥ ಮಂಡಳಿ ಗೌರವಾಧ್ಯಕ್ಷ ಅಜಯ ಒಡೆಯರ್, ಜಯಪ್ಪ, ಎಚ್.ಎಸ್.ಬಸವರಾಜು, ರಾಜಪ್ಪ, ಕೆ.ಎಂ.ಶಾಂತಪ್ಪ, ಇ.ಆರ್.ಮಹೇಶ್, ಗ್ರಾಪಂ ಅಧ್ಯಕ್ಷ ವಸಂತ, ಕೆ.ಎಂ.ರೇವಣಸಿದ್ದಯ್ಯ, ಬೇಗೂರು ಬೀರಲಿಂಗೇಶ್ವರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಆಸಂಧಿ ಕಲ್ಲೇಶ್, ಆರ್.ಶ್ರೀನಿವಾಸ್‌ಮೂರ್ತಿ, ಸೀಗೆಹಡ್ಲು ಹರೀಶ್, ಕೆ.ಜಿ.ಲೋಕೇಶ್ವರ್, ಎಚ್.ಡಿ.ದೇವರಾಜ್, ಮಲ್ಲಪ್ಪ, ಯರದಕೆರೆ ಓಂಕಾರ್, ಭೋಗಪ್ಪ, ಕೇದಿಗೆರೆ ಓಂಕಾರ್, ಪ್ರಮೋದ್ ಮತ್ತಿತರರಿದ್ದರು.