

ತನ್ನ ಸಹೋದರಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದ ಬಾವನನ್ನು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದೆ.
ಎಚ್.ಡಿ.ಕೋಟೆಯ ಹನುಮಂತ ನಗರದ ನಿವಾಸಿ, ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್ ಆಗಿರುವ ಮಲ್ಲೇಶ್ ನಾಯ್ಕ ಎಂಬಾತ ಪತ್ನಿ ಮಧುರಾ(28) ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ವೇಳೆ ಇವರು ಸಹ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಬಾವನ ಕೃತ್ಯದಿಂದ ಕೋಪಗೊಂಡ ಮಧುರಾನ ಸೋದರ ನಾಗರಾಜು, ದಟ್ಟಗಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮಲ್ಲೇಶ್ ನಾಯ್ಕ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ತಕ್ಷಣ ಆಸ್ಪತ್ರೆಯ ಸಿಬ್ಬಂದಿ ಬಿಡಿಸಿದ್ದು, ಪೊಲೀಸರ ವಶಕ್ಕೆ ನೀಡಿದ್ದಾರೆ.
ಗಾಯಾಳು ನೀಡಿದ ದೂರಿನ ಮೇರೆಗೆ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ನಾಗರಾಜು ಅವರನ್ನು ಬಂಧಿಸಲಾಗಿದೆ.