

ಹಾಸನ: ಮಕ್ಕಳು ತಾವು ನೋಡಿದ, ಕೇಳಿದ ವಿಷಯಗಳ ಬಗ್ಗೆ ಕಲ್ಪನೆ ಹೆಣೆದು ಕಥೆ ರಚಿಸಬಹುದು. ಕಥೆ ಬರೆಯುವಾಗ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕಾಗುತ್ತದೆ ಎಂದು ಸಾಹಿತಿ ಎನ್. ಶೈಲಜಾ ಹಾಸನ ಅಭಿಪ್ರಾಯಪಟ್ಟರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಬೆಂಗಳೂರು, ಹಾಸನ ತಾಲೂಕು ಘಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ ಸಹಯೋಗದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಕ್ಕಳಿಗಾಗಿ ಉಚಿತ ಸಾಹಿತ್ಯ ಶಿಬಿರದಲ್ಲಿ ಕಥಾ ರಚನೆ ಮತ್ತು ಓದುವಿಕೆ ಬಗ್ಗೆ ತರಬೇತಿ ನೀಡಿ ಮಾತನಾಡಿದರು.
ಸಾಮಾನ್ಯ ಮತ್ತು ಪ್ರಾಪಂಚಿಕ ಘಟನೆಗಳಿಂದ ಹೆಕ್ಕಿ ತೆಗೆದು ಕಥೆ ತಯಾರು ಮಾಡುವ ರೀತಿ, ಕಥೆಯಲ್ಲಿನ ಕ್ರಿಯಾಶೀಲ ಅಂಶಗಳು, ಅದರಲ್ಲಿನ ಬರಹ, ಧ್ವನಿ ಮತ್ತು ಚಿತ್ರಗಳು ಕೂಡ ಮುಖ್ಯವಾಗುತ್ತವೆ. ಮಕ್ಕಳು ತಮ್ಮ ಸೀಮಿತ ಪರಿಧಿಯಲ್ಲಿ ಪ್ರಾಣಿ, ಪಕ್ಷಿ, ರಾಮಾಯಣ, ಮಹಾಭಾರತ, ರಾಜಕುಮಾರಿ, ಮಂತ್ರವಾದಿ, ಕಾಡು, ನದಿ, ಅಪ್ಪ, ಅಮ್ಮ, ಅಕ್ಕ, ತಮ್ಮ, ಗೆಳೆಯ, ಗೆಳತಿಯರ ಬಗ್ಗೆ ಚಿಕ್ಕ ಚಿಕ್ಕ ಕಥೆಗಳನ್ನು ಬರೆಯಲು ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ಘಟಕದ ಅಧ್ಯಕ್ಷೆ ಕೆ.ಸಿ.ಗೀತಾ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಆಯುಕ್ತೆ ಎಚ್.ಎಂ. ಪ್ರಿಯಾಂಕಾ, ಸಿ.ಎಸ್. ರಂಜಿತಾ, ರೋವರ್ ಚಿರು ಇತರರಿದ್ದರು.