ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸಿ

1
Published on

ಪಾಲಕರು ಎಷ್ಟೇ ಕಷ್ಟವಾದರೂ ಮಕ್ಕಳ ಆರೋಗ್ಯವನ್ನು ಕಾಪಾಡುವ ಜತೆಗೆ ಶಿಕ್ಷಣ ಕೊಡಿಸಬೇಕು, ಶಿಕ್ಷಣವೇ ಮಕ್ಕಳಿಗೆ ದೊಡ್ಡ ಆಸ್ತಿ ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.

ಹೂಟಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಮೈಸೂರು ಗ್ರಾಮಾಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣೆ ಹಾಗೂ ಮೌಲ್ಯಾಂಕನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್, ಜ್ಯೋತಿಬಾಫುಲೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಇಂದು ಶಿಕ್ಷಣ ಕಲಿಯದಿದ್ದರೆ ಸಮಸ್ಯೆಯಾಗಲಿದೆ. ಶಿಕ್ಷಣ ಅಂದರೆ ಓದು, ಬರೆಯುವುದು ಅಲ್ಲ. ಸಂಸ್ಕಾರಯುತ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಬೇಕು ಎಂದು ಹೇಳಿದರು.

ವಿಶೇಷಚೇತನ ಮಕ್ಕಳಿಗೂ ಆರೋಗ್ಯ ಮತ್ತು ಶಿಕ್ಷಣ ಕೊಡಿಸಲು ಗಮನಹರಿಸಬೇಕು. ಅಂಗವೈಕಲ್ಯ ಹಿನ್ನಡೆ ಎನ್ನುವ ಭಾವನೆ ಇಟ್ಟುಕೊಳ್ಳದೆ ಮುನ್ನಡೆಯಂತೆ ಕಾಣಬೇಕು. ವಿಶೇಷಚೇತನರ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ದೇವರು ಕೊಟ್ಟ ವರವೆಂದು ನೋಡಿಕೊಳ್ಳುತ್ತಾರೆ. ವಿಶೇಷಚೇತನರಿಗೆ ಅನುಕಂಪ ಮುಖ್ಯವಲ್ಲ. ಉತ್ಸಾಹ ತುಂಬಿ ವಿದ್ಯಾವಂತರನ್ನಾಗಿ ಮಾಡಿದರೆ ಸ್ವಯಂಬಲದಿಂದ ಬದುಕುತ್ತಾರೆ. ಎಲ್ಲರಂತೆ ಬದುಕು ಕಟ್ಟಿಕೊಳ್ಳಲಿದ್ದಾರೆ. ಸರ್ಕಾರವೂ ವಿಶೇಷಚೇತನರಿಗೆ ಹಲವಾರು ಯೋಜನೆಗಳನ್ನು ರೂಪಿಸಿರುವುದರಿಂದ ಪಾಲಕರು ಬಳಸಿಕೊಳ್ಳಬೇಕು ಎಂದರು.

ಮೈಸೂರು ತಾಲೂಕಿಗೆ ಮೂರು ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರಾಗಿದ್ದು, ಅದರಲ್ಲಿ ಹೂಟಗಳ್ಳಿಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನು ಸೇರಿಸಲಾಗಿದೆ. ಶಿಕ್ಷಕರು ಶ್ರಮಪಟ್ಟು ಕೆಲಸ ಮಾಡಿದರೆ ಉತ್ತಮ ಸ್ಥಾನ ಪಡೆಯಬಹುದು. ಹೂಟಗಳ್ಳಿ ಶಾಲೆಯು ರಾಜ್ಯಕ್ಕೆ ಪ್ರಥಮ ಸ್ಥಾನಕ್ಕೆ ಬರಬೇಕು ಎಂದು ಕರೆ ನೀಡಿದರು.

ಜೆ.ಕೆ.ಟೈರ್ಸ್ ವತಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ಹೂಟಗಳ್ಳಿ ಗ್ರಾಮದ ಮುಖಂಡ ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲೇಗೌಡ, ಮುಖ್ಯ ಶಿಕ್ಷಕ ದುಂಡಯ್ಯ, ವೈದ್ಯಚೇತನ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸಂಗೀತ, ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸತೀಶ್, ಜೆ.ಕೆ.ಟೈರ್ಸ್‌ನ ಜಗದೀಶ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net