

ಶೃಂಗೇರಿ: ಸೇವೆ ಎಂಬುದು ರೋಟರಿ ಸಂಸ್ಥೆಯ ಪ್ರಮುಖ ಧ್ಯೇಯ. ಸಮಾಜಕ್ಕೆ ಮಾದರಿಯಾಗುವ ಯೋಜನೆಗಳನ್ನು ಸಂಸ್ಥೆ ರೂಪಿಸಿಕೊಳ್ಳಬೇಕು. ಇಂತಹ ಯೋಜನೆಗಳು ಜನಸಾಮಾನ್ಯರನ್ನು ತಲುಪಿದಾಗ ಮಾತ್ರ ರೋಟರಿ ಉದ್ದೇಶ ಯಶಸ್ವಿಯಾಗಲು ಸಾಧ್ಯ ಎಂದು ಜಿಲ್ಲಾ ರೋಟರಿ-3182ರ ರಾಜ್ಯಪಾಲರಾದ ಬಿ.ಸಿ.ಗೀತಾ ತಿಳಿಸಿದರು.
ಬುಧವಾರ ರೋಟರಿ ಭವನದಲ್ಲಿ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.·ಮೌಲ್ಯಯುತ ಶಿಕ್ಷಣದ ಅಗತ್ಯತೆ ಪ್ರಸ್ತುತ ಹೆಚ್ಚಾಗಿದೆ. ಮುಂದಿನ ಪೀಳಿಗೆಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮೊಬೈಲ್ ಬಳಕೆ ಬಗ್ಗೆ ಯುವ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದರು.
ಶಿಕ್ಷಣ ಪಡೆದ ಬಳಿಕ ನಿಂತ ನೀರಾಗದೆ ಉದ್ಯೋಗ ಮಾಡಿದಾಗ ಮಾತ್ರ ದೇಶದ ಪ್ರಗತಿ ಆಗುತ್ತದೆ. ಮಾಡುವ ಕೆಲಸ ಸಣ್ಣದಿರಲಿ ಅದನ್ನು ಗೌರವದಿಂದ ಮಾಡಿದಾಗ ಮಾತ್ರ ಶ್ರೇಯಸ್ಸು ಲಭಿಸುತ್ತದೆ. ಶೃಂಗೇರಿ ರೋಟರಿ ಸಂಸ್ಥೆ ಕಳೆದ ಎರಡು ದಶಕಗಳಿಂದ ಅತ್ಯುನ್ನತ ಸೇವಾ ಕಾರ್ಯದಿಂದ ಜಿಲ್ಲೆಯ ಉತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆಗಾಗಿ ಕೋನ್‌ವೆಕ್ಸ್ ಮಿರರ್‌ನ್ನು ಪಿಎಸ್‌ಐ ಬರಮಪ್ಪ ಬೆಳಗಲಿ ಅವರಿಗೆ ಹಸ್ತಾಂತರಿಸಲಾಯಿತು. ಪರಿಸರ ಪ್ರೇಮಿ ಚಂದ್ರಶೇಖರ್ ಭಟ್, ಹೋಟೆಲ್ ಕಾರ್ಮಿಕ ಸುಂದರಪೂಜಾರಿ ದಂಪತಿಗೆ ಗೌರವಿಸಲಾಯಿತು. ಉಪರಾಜ್ಯಪಾಲ ಜೆ.ಎಂ. ಶ್ರೀಹರ್ಷ, ವಲಯ ಸೇನಾನಿ ಕೆ.ಶಶಿಶೇಖರ್, ಅಧ್ಯಕ್ಷ ಚರಣ್, ಕಾರ್ಯದರ್ಶಿ ಗೌತಮ್, ಮಾಜಿ ಅಧ್ಯಕ್ಷ ನಾಗೇಶ್ ಕಾಮತ್ ಇದ್ದರು.