

ಕಡೂರು: ಕಾನೂನು ಉಲ್ಲಂಘಿಸಿದಂತೆ ಎಲ್ಲರೂ ಪರಿಪಾಲನೆ ಮಾಡಬೇಕಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಚ್.ಪಿ.ಮೋಹನ್‌ಕುಮಾರ್ ಹೇಳಿದರು.
ಪಟ್ಟಣ ಸಮೀಪದ ಪ್ರಜ್ಞಾ ಸೆಂಟ್ರಲ್ ಶಾಲೆಯಲ್ಲಿ ಶುಕ್ರವಾರ ಕಾನೂನು ಸೇವಾ ಸಮಿತಿಯಿಂದ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಯಾರಿಗೂ ನ್ಯಾಯಾಲಯದ ಬಗ್ಗೆ ಪರಿಪೂರ್ಣ ಅರಿವು ಇರಲಿಲ್ಲ. ಇತ್ತೀಚೆಗೆ ಮಕ್ಕಳಿಗೂ ಕಾನೂನು ಬಗ್ಗೆ ತಿಳಿಯಬೇಕು ಎಂಬ ಕಾತುರ ಇದೆ. 18ನೇ ವರ್ಷದೊಳಗಿನ ಮಕ್ಕಳು ವಾಹನ ಚಾಲನೆ ಮಾಡಬಾರದು. ಇದನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಮಕ್ಕಳಿಗೆ ದ್ವಿಚಕ್ರ ವಾಹನ ನೀಡಿದ ಪಾಲಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾನೂನಿನಲ್ಲಿ ಬಡವ ಶ್ರೀಮಂತ ಎಂಬ ಭೇದವಿಲ್ಲ. ಆರ್ಥಿಕವಾಗಿ ಹಿಂದುಳಿದಿರುವವರಿಗಾಗಿ ಕಾನೂನು ಸೇವಾ ವಿಭಾಗವಿದ್ದು ಅವರಿಗೆ ಅಗತ್ಯ ಕಾನೂನಿನ ನೆರವು ನೀಡಲಾಗುತ್ತದೆ ಎಂದರು.
1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅರವಿಂದ್ರ ಮಾತನಾಡಿ, ದೇಶದಲ್ಲಿ ಕಾನೂನು
ಸೇವಾ ಸಮಿತಿಯು 1994ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಆರ್ಥಿಕವಾಗಿ
ಸಮರ್ಥರಿಲ್ಲದವರಿಗೆ ಸಹಾಯ ಮಾಡಲಿದೆ. ಮಕ್ಕಳು ಮೊಬೈಲ್ ಬಳಕೆಯಿಂದ ದೂರ ಉಳಿದು ಹೆಚ್ಚು ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಂಡಲ್ಲಿ ಜ್ಞಾನ ವಿಕಾಸ ಆಗಲಿದೆ ಎಂದರು. 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಚ್.ವಿ.ಸವಿತಾರಾಣಿ ಮಾತನಾಡಿದರು. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎನ್. ರಾಜಣ್ಣ, ಕಾರ್ಯದರ್ಶಿ ಎನ್.ಪಿ. ಮಂಜುನಾಥ ಪ್ರಸನ್ನ, ಸರ್ಕಾರಿ ಅಭಿಯೋಜಕ ಬಿ.ಎನ್.ಹರೀಶ್, ಪ್ರಾಂಶುಪಾಲರಾದ ಕ್ಲಾರಾಡಿಮೆಲು ಮತ್ತಿತರರಿದ್ದರು.