

ಮಕ್ಕಳನ್ನು ಮೊಬೈಲ್‌ನಲ್ಲಿ ಮುಳುಗದಂತೆ ಬಿಡದೆ, ಪಠ್ಯದೊಂದಿಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಹೆಚ್ಚು ಕ್ರಿಯಾಶೀಲರಾಗುವಂತೆ ನೋಡಿಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹೇಳಿದರು.
ಕುವೆಂಪುನಗರದ ತಪೋನಂದನ ಉದ್ಯಾನದ ಎದುರು ಇರುವ ರಂಗಾಂತರಂಗ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಲರವ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಆಟ-ಪಾಠಗಳನ್ನು ಮರೆತು, ಹೆಚ್ಚಾಗಿ ಮೊಬೈಲ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಲೇ ಇರುತ್ತಾರೆ. ಪಾಲಕರು ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ, ಸಮಾಜದಲ್ಲಿ ನಡೆಯುತ್ತಿರುವ ಸಾಮಾಜಿಕ ವಿಷಯಗಳ ತಿಳಿಸಿ, ಮೊಬೈಲ್‌ನಿಂದ ದೂರ ಇರಿಸಬೇಕು ಎಂದು ತಿಳಿಸಿದರು.
ಹಿಂದಿನ ದಿನಗಳಲ್ಲಿ ಬೇಸಿಗೆ ರಜೆಯಲ್ಲಿ ಮಕ್ಕಳು, ಅಜ್ಜ-ಅಜ್ಜಿಯರ ಊರಿಗೆ ಹೋಗಿ, ಅಲ್ಲಿನ ಸುಂದರ ವಾತಾವರಣದಲ್ಲಿ ಕಾಲ ಕಳೆದು ಸಂತೋಷದಿಂದ ಬರುತ್ತಿದ್ದರು. ಆದರೀಗ ಕಾಲ ಬದಲಾಗಿದ್ದು, ಬೇಸಿಗೆ ಶಿಬಿರಗಳ ಪ್ರಯೋಜನವನ್ನು ಮಕ್ಕಳು ಪಡೆದರೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿ ಖುಷಿಯಾಗಿ ಬಾಲ್ಯದ ದಿನಗಳನ್ನು ಕಳೆಯಬಹುದು ಎಂದು ಹೇಳಿದರು.
ಬೇಸಿಗೆ ಶಿಬಿರಗಳು ಮಕ್ಕಳಿಗೆ ಬದುಕುವ ಕಲೆ ಕಲಿಸುತ್ತವೆ. ಇಲ್ಲಿ ಹೇಳಿ ಕೊಡುವ ಜಾನಪದ ನೃತ್ಯ, ಹಾಡುಗಾರಿಕೆ, ಸಂವಾದ, ಗುಂಪು ಚರ್ಚೆ, ಆಟಗಳು ಮಕ್ಕಳ ಭವಿಷ್ಯದ ಮೇಲೆ ಉತ್ತಮ ಪರಿಣಾಮ ಬೀರಲಿದೆ. ಮಕ್ಕಳಿಗೆ ಶಿಸ್ತಿನ ಜೀವನದ ಜತೆಗೆ ಮಾನವೀಯ ಮೌಲ್ಯಗಳನ್ನು ಕಲಿಸಬೇಕು ಎಂದರು.
ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಮಕ್ಕಳ ಮನಸ್ಸು ಮುಗ್ಧವಾಗಿದ್ದು, ಬಾಲ್ಯದಲ್ಲಿ ನಾವು ಅವರನ್ನು ಯಾವ ರೀತಿಯಲ್ಲಿ ಬೆಳೆಸುತ್ತೇವೆ. ಅಂತಹ ವಾತಾವರಣದಂತೆ ಅವರು ಬೆಳೆಯುತ್ತಾರೆ. ಬೆಳೆಯುವ ಮನಸ್ಸುಗಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿಕೊಂಡು ಹೋದರೆ, ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ ಎಂದು ಹೇಳಿದರು.
ಮಕ್ಕಳು ಮೊಬೈಲ್ ಗೀಳಿಗೆ ಮಾರುಹೋಗಬಾರದು. ಇಂದು ತಜ್ಞರು ವಿಶ್ಲೇಷಿಸುತ್ತಿರುವ ಪ್ರಕಾರ ಹೆಚ್ಚು ಸಮಯ ಮೊಬೈಲ್ ಬಳಸುವ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವ ಅಂಶ ಬಂದಿದೆ. ಮೊಬೈಲ್‌ನಲ್ಲಿ ಎಲ್ಲ ವಿಷಯಗಳು ಸಿಗುತ್ತವೆ ಎಂದು ಪಾಲಕರು, ಮಕ್ಕಳಿಗೆ ಹೆಚ್ಚಾಗಿ ಮೊಬೈಲ್ ಕೊಡಬಾರದು. ಮೊಬೈಲ್‌ಗಳೇ ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತದೆ. ಇಂತಹ ಬೇಸಿಗೆ ಶಿಬಿರಗಳಿಂದ ಮಕ್ಕಳ ಮನಸ್ಸು ಅರಳುತ್ತವೆ ಎಂದು ಹೇಳಿದರು. ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ವಕೀಲ ಬಿ.ಆರ್.ರಂಗಸ್ವಾಮಿ ಇದ್ದರು.