

ರಾವಂದೂರು: ಶಾಲಾ ಹಂತದಲ್ಲಿ ಮಕ್ಕಳಿಗೆ ನೀಡುವ ಪ್ರೋತ್ಸಾಹ ಅವರನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಸಿ.ಪ್ರಶಾಂತ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಮಾಕೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿ ವಿದ್ಯಾರ್ಥಿಯಲ್ಲಿ ಪ್ರತಿಭೆ ಅಡಗಿರುತ್ತದೆ. ಅದನ್ನು ಪ್ರೋತ್ಸಾಹಿಸಿ ಪೋಷಿಸಿದಾಗ ಉತ್ತಮ ಪ್ರತಿಭೆಗಳು ಹೊರಬರುತ್ತವೆ. ಜತೆಗೆ ಮಕ್ಕಳು ಪ್ರತಿಭಾವಂತರಾಗಿ ಬೆಳೆಯಲು ಪ್ರೋತ್ಸಾಹ ಸಿಗುತ್ತದೆ ಎಂದರು.
ವಿದ್ಯಾರ್ಥಿ ದಿಸೆಯಲ್ಲಿ ಶಿಕ್ಷಕರ ಪ್ರೇರಣೆಯಿಂದ ಕಲಿತ ಭಾಷಣ ದೊಡ್ಡವನಾದ ಬಳಿಕ ಸಂಪಾದನೆಗೆ ದಾರಿ ಮಾಡಿಕೊಡುತ್ತದೆ. ಹೀಗೆ ಹಲವು ವಿದ್ಯಾರ್ಥಿಗಳಲ್ಲಿರುವ ಹಾಡುಗಾರಿಗೆ, ಮಾತುಗಾರಿಕೆ, ನೆನಪಿನ ಶಕ್ತಿ ಮುಂತಾದವುಗಳು ಆತನನ್ನು ಪ್ರಭಾವಿ ವ್ಯಕ್ತಿಯಾಗಿ ಬೆಳೆಯಲು ಪ್ರತಿಭಾಕಾರಂಜಿಯಂತ ಕಾರ್ಯಕ್ರಮಗಳು ಉತ್ತಮ ವೇದಿಕೆ ಒದಗಿಸುತ್ತದೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರು ಮಾತನಾಡಿದರು. ವರ್ಗಾವಣೆಗೊಂಡ 13 ಶಿಕ್ಷಕರನ್ನು ಶಾಲೆ ವತಿಯಿಂದ ಬೀಳ್ಕೊಡಲಾಯಿತು. ಬಿಆರ್‌ಪಿ ಶ್ರೀನಿಧಿ, ಸಿಆರ್‌ಪಿಗಳಾದ ಮಂಜುನಾಥ್, ನಾಗೇಶ್,ನಟರಾಜು, ಎಸ್‌ಡಿಎಂಎಸಿ ಅಧ್ಯಕ್ಷ ರಮೇಶ್, ಸದಸ್ಯರಾದ ನಾಗೇಗೌಡ, ನದೀಮ್, ಮುಖ್ಯ ಶಿಕ್ಷಕ ರಾಜು, ರಾಮರಾಜು, ಲೋಕೇಶ್, ಜಾವಿದ್‌ಪಾಷ, ಗೋವಿಂದರಾಜು, ಕುಮಾರ್, ರಮೇಶ್, ಭರತ್‌ವರ್ಷ, ಚಂದ್ರಶೇಖರ್, ಗೀತಾ, ಅನಿತಾ, ಯಮುನಾ ಮತ್ತಿತರರು ಹಾಜರಿದ್ದರು.