ಮಕ್ಕಳಲ್ಲಿ ಸಂಸ್ಕಾರ ಬಿತ್ತಿ

16NGD1
Published on


ನಂಜನಗೂಡು: ಬಾಲ್ಯದಿಂದಲೇ ಮಾತಿನಲ್ಲಿ ನಯ, ನಡತೆಯಲ್ಲಿ ವಿನಯ, ವದನದಲ್ಲಿ ಹೂ ನಗೆಯ ಸಿಂಚನ ಮೂಡುವಂತಹ ಸಂಸ್ಕಾರವನ್ನು ಮಕ್ಕಳಲ್ಲಿ ಬಿತ್ತಿದರೆ ತೃಪ್ತಿದಾಯಕ ಜೀವನ ಕಂಡುಕೊಳ್ಳಲು ನೆರವಾಗುತ್ತದೆ ಎಂದು ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠದ ವಿಷಯ ಪರಿವೀಕ್ಷಕ ನಾಗರಾಜು ಸಲಹೆ ನೀಡಿದರು.:
ನಗರದ ಹೌಸಿಂಗ್‌ಬೋರ್ಡ್ ಕಾಲನಿಯಲ್ಲಿರುವ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಮಹಾಮನೆಯಲ್ಲಿ ಭಾನುವಾರ ಉಚಿತ ಯೋಗ ಮತ್ತು ಬೌದ್ಧಿಕ್ ಮಕ್ಕಳ ವಸಂತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ನಯ, ವಿನಯ, ನಗು ಮಾನವನ ಬದುಕಿನ ಅತ್ಯವಶಕ್ಯವಾಗಿ ಬೇಕಾಗಿರುವ ಮೌಲ್ಯಗಳಾಗಿವೆ. ಅವುಗಳನ್ನು ಬಾಲ್ಯದಲ್ಲೇ ಮಕ್ಕಳಲ್ಲಿ ಬಿತ್ತುವಂತಹ ಸಂಸ್ಕಾರವನ್ನು ನೀಡಿದಾಗ ಮಾತ್ರ ಸೃಜನಶೀಲತೆ ಮೂಡುತ್ತದೆ. ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಮನಸ್ಸು ಪ್ರಫುಲ್ಲವಾಗಿದ್ದಾಗ ಮಾತ್ರ ಸದಾ ಒಳಿತನ್ನೇ ತುಡಿಯುತ್ತದೆ ಎಂದರು.
ವೈವಿಧ್ಯಮಯ ದೃಷ್ಟಿಕೋನ ಬೆಳೆಸಿಕೊಳ್ಳಲು ಯೋಗ, ಧ್ಯಾನ ಸಹಕಾರಿಯಾಗಿವೆ. ಮಕ್ಕಳು ಸ್ವೀಕಾರ ಮನೋಭಾವ ರೂಢಿಸಿಕೊಳ್ಳಬೇಕು. ತುಲನೆ ಮಾಡಿ ಒಳಿತು ಕೆಡಕನ್ನು ನಿರ್ಧರಿಸುವ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ಆಗ ಋಣಾತ್ಮಕ ಅಂಶಗಳನ್ನು ಧನಾತ್ಮಕವಾಗಿ ಪರಿವರ್ತಿಸುವ ಉದಾರತೆ ನಮ್ಮಲ್ಲಿ ಮೂಡುತ್ತದೆ ಎಂದರು.
ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ ಮಾತನಾಡಿ, 15 ವರ್ಷಗಳಿಂದ ನಿರಂತರವಾಗಿ ಬೇಸಿಗೆ ರಜೆಯಲ್ಲಿ ಮಕ್ಕಳಿಗಾಗಿ ಉಚಿತ ಯೋಗ ಮತ್ತು ಬೌದ್ಧಿಕ್ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಪ್ರತಿ ವರ್ಷ 100ಕ್ಕೂ ಹೆಚ್ಚು ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಗುಣಾತ್ಮಕ ಹಾಗೂ ರಚನಾತ್ಮಕ ವಿಷಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net