

ಬೀರೂರು: ಕುಟುಂಬ ಸಂಸ್ಕಾರದ ಆದ್ಯತೆ ಜತೆ ಮಕ್ಕಳಲ್ಲಿ ಮಾತೃಭಾಷೆ ಮೇಲೆ ಅಭಿಮಾನ ಮೂಡಿಸಲು ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಂಚಾಲಕಿ ಪದ್ಮಕ್ಕ ತಿಳಿಸಿದರು.
ಹಳೇಪೇಟೆ ಈಶ್ವರೀಯ ವಿದ್ಯಾಲಯದಲ್ಲಿ ಶುಕ್ರವಾರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು.
ವೈಚಾರಿಕತೆ, ಆಧುನಿಕತೆ ನೆಪದಲ್ಲಿ ಮಕ್ಕಳು ಮಾತೃಭಾಷೆ ಅಭಿಮಾನದಿಂದ ದೂರಾಗುತ್ತಿದ್ದು, ಭಾಷಾಭಿಮಾನ ಮೂಡಿಸುವ ಕೆಲಸ ಆಗಬೇಕಿದೆ. ಸರ್ಕಾರಿ ಶಾಲೆಗಳ ಉಳಿವಿಗೆ ಪಾಲಕರು ಕನ್ನಡಪರ ಸಂಘಟನೆಗಳು, ಸರ್ಕಾರ ಇನ್ನಷ್ಟು ಕ್ರಿಯಾಶೀಲವಾಗಬೇಕಿದೆ ಎಂದರು.
ಪುರಸಭಾಧ್ಯಕ್ಷೆ ವನಿತಾ ಮಧು ಬಾವಿಮನೆ ಮಾತನಾಡಿ, ಕನ್ನಡಪರ ಚಟುವಟಿಕೆಗಳಲ್ಲಿ ಮಹಿಳೆಯರು ಸಕ್ರಿಯರಾಗಿ ನಾಡು, ನುಡಿ ಸಂರಕ್ಷಣೆ ಕಾಳಜಿ ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಕನ್ನಡ ಭಾಷೆ ಶ್ರೀಮಂತಿಕೆಗೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಜತೆ ನವೆಂಬರ್‌ನಲ್ಲಿ ಮಾತ್ರ ಕನ್ನಡಿಗರಾಗದೆ ನಿತ್ಯ ಕನ್ನಡಿಗರಾಗೋಣ ಎಂಬ ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಮಹಿಳಾ ಘಟಕ ಅಧ್ಯಕ್ಷೆ ಸವಿತಾ ಸತ್ಯನಾರಾಯಣ್ ಮಾತನಾಡಿ, ಭಾಷಾ ಉಳಿವಿನ ಜವಾಬ್ದಾರಿ ಸಂಘಟನೆಗಳಿಗೆ ಸೀಮಿತವಾಗಿರದೆ ಪ್ರತಿಯೊಬ್ಬರ ಅಂತರಾಳದ ನುಡಿಜಾಗೃತಿ ಸಂವೇದನೆಯಾಗಿರಬೇಕು. ಕಡೂರಿನಲ್ಲಿ ಪ್ರತಿಷ್ಠಾಪಿಸಲಿರುವ ಕನ್ನಡ ರಾಜರಾಜೇಶ್ವರಿಯ ಪುತ್ಥಳಿ ಅನಾವರಣದಲ್ಲಿ ಹೆಚ್ಚಿನ ಮಹಿಳೆಯರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಲತಾ ರಾಜಶೇಖರ್ ಮಾತನಾಡಿ, ಮಹಿಳೆಯರು ಹೆಚ್ಚಿನ ಸದಸ್ಯತ್ವ ಪಡೆದು ಕನ್ನಡಪರ ಕೆಲಸಗಳಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕಿರುನಾಟಕ ಪ್ರದರ್ಶನ ಹಾಗೂ ಕನ್ನಡ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹೋಬಳಿ ಮಹಿಳಾ ಘಟಕ ಅಧ್ಯಕ್ಷೆ ಸ್ಮೀತಾ ಮಹೇಂದ್ರ, ನಗರ ಕಸಾಪ ಘಟಕ ಅಧ್ಯಕ್ಷೆ ಎನ್.ಡಿ.ಸೀತಾಲಕ್ಷೀ, ಕಸಾಪ ಹಿರಿಯ ಸದಸ್ಯ ಸೋಮಣ್ಣ, ಮಹಿಳಾ ಘಟಕದ ಶೋಭಾ ಉಮೇಶ್, ಮಂಜುಳಾ ರಾಜಪ್ಪ, ದಿವ್ಯಾ ಶಶಿಧರ್, ರಾಜೇಶ್ವರಿ, ರಶ್ಮಿ ದಯಾನಂದ್, ಹೇಮಾ ಚೇತನ್, ಮಮತಾ ಆನಂದ್, ಸದಸ್ಯೆಯರು ಇದ್ದರು.