ಮಕ್ಕಳಲ್ಲಿ ದೇವರನ್ನು ಕಾಣಿ, ತಾರತಮ್ಯವಿಲ್ಲದೇ ಶಿಕ್ಷಣ ನೀಡಿ ವೃತ್ತಿ ಘನತೆ ಉಳಿಸಿ / ಹಣಕ್ಕಾಗಿ ಕೆಲಸ ಮಾಡುವುದಾದರೆ ಬೇರೆ ವೃತ್ತಿ ಆಯ್ಕೆ ಮಾಡಿಕೊಳ್ಳಿ / ಡಿಸಿಪಿ ದೇವರಾಜ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಮಕ್ಕಳಲ್ಲಿ ದೇವರನ್ನು ಕಾಣಬೇಕು, ಯಾವುದೇ ತಾರತಮ್ಯವಿಲ್ಲದೇ ನೀಡುವ ಶಿಕ್ಷಣದಿಂದ ನಿಮ್ಮ ವೃತ್ತಿ ಘನತೆ ಹೆಚ್ಚುತ್ತದೆ ಸದಾ ನೆನಪಿನಲ್ಲಿರುವಂತೆ ಮಾಡುತ್ತದೆ ಎಂದು ಶಿಕ್ಷಕರಿಗೆ ಬೆಂಗಳೂರು ಡಿಸಿಪಿ ದೇವರಾಜ್ ಕಿವಿಮಾತು ಹೇಳಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಭಾನುವಾರ ಶಿಕ್ಷಕ ಗೆಳೆಯರ ಬಳಗದಿಂದ ನಡೆದ ಜಿಲ್ಲಾ ಮಟ್ಟದ ಸಾವಿತ್ರಿಬಾಯಿ ಫುಲೆ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ಶಿಕ್ಷಕಿಯರನ್ನು ಸನ್ಮಾನಿಸಿ ಮಾತನಾಡಿದರು.

ಮಕ್ಕಳಿಗೆ ವಿದ್ಯೆಯನ್ನು ಪ್ರಾಮಾಣಿಕವಾಗಿ ಕಲಿಸಬೇಕು ಬರಿ ಸಂಬಳಕ್ಕಾಗಿ ನಾವು ಕೆಲಸ ಮಾಡಬಾರದು. ಅಂತವರು ಯಾರಾದರೂ ಇದ್ದರೆ ದಯವಿಟ್ಟು ಶಿಕ್ಷಕ ವೃತ್ತಿಯನ್ನು ಬಿಟ್ಟು ಬೇರೆ ಕ್ಷೇತ್ರವನ್ನು ಆರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಬಾಲಾಪರಾಧಿಗಳು ಹೆಚ್ಚಾಗಲು ಕಾರಣ ಏನು ಎಂಬುದನ್ನು ಶಿಕ್ಷಕರು ಮತ್ತು ಪೋಷಕರು ಜಂಟಿಯಾಗಿ ಚರ್ಚೆ ಮಾಡಬೇಕು ಕೋವಿಡ್ ಬಂದಾಗಿನಿAದ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿವೆ. ಈ ಬಗ್ಗೆ ಇಲಾಖೆಯು ಸರ್ಕಾರವು ಎಷ್ಟೇ ಕ್ರಮ ವಹಿಸಿದರೂ ಶಿಕ್ಷಕರು ಮತ್ತು ಪೋಷಕರು ಜಾಗೃತರಾಗಿರಬೇಕು. ಹೆಣ್ಣು ಮಕ್ಕಳಿಗೆ ಎಲ್ಲಾ ರೀತಿಯ ಸಹಕಾರ ಸಿಗುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದರು.

ಸಾವಿತ್ರಿ ಬಾಯಿ ಫುಲೆ ರವರು ಬಾಲ್ಯದ ದಿನಗಳಲ್ಲಿ ದಿಟ್ಟತನದಿಂದ ಎದುರಿಸಿ ವಿದ್ಯಾಭ್ಯಾಸವನ್ನು ಮಾಡಿ ಶಿಕ್ಷಕಿಯಾಗಿ ಸಾಮಾನ್ಯ ಮಹಿಳೆಯರಿಗೆ ಶಿಕ್ಷಣ ಕಲಿಸಿ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂಬ ಹೆಸರು ಗಳಿಸಿದ್ದಾರೆ. ಆ ಹೆಸರನ್ನು ನೀವು ಉಳಿಸಿಕೊಂಡು ಹೋದಾಗ ಮಾತ್ರ ಇಂಥ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಮಾತನಾಡಿ, ನಮ್ಮ ಸಂಘವು ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಸಾರ್ವಜನಿಕರಿಂದ ಅಧಿಕಾರಿಗಳಿಂದ ಪ್ರಶಂಸೆಗೆ ಒಳಪಟ್ಟಿದೆ ಅದನ್ನು ಶಿಕ್ಷಕರು ಬಳಸಿಕೊಂಡು ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ಉಪಾಧ್ಯಕ್ಷ ವೀರಣ್ಣ ಗೌಡ, ಕಾರ್ಯದರ್ಶಿ ಹಾಗೂ ನೌಕರರ ಸಂಘದ ನಿರ್ದೇಶಕರಾದ ವೆಂಕಟ ಚಲಪತಿ ಗೌಡ, ಗೋವಿಂದು, ಶಿಕ್ಷಕ ಗೆಳೆಯರ ಬಳಗದ ಸೋಮಶೇಖರ್, ಚಿಕ್ಕಣ್ಣ,ನಾಗರಾಜ್, ವೆಂಕಟರಾಮ್, ಮಂಜುಳಾ, ಭಾಗ್ಯಲಕ್ಷಿ÷್ಮ, ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಎಲ್ಲಾ ತಾಲೂಕಿನ ಶಿಕ್ಷಕರ ಸಂಘದ ಮುಖಂಡರು ಹಾಗೂ ಸರ್ಕಾರಿ ನೌಕರರ ಸಂಘದ ಮುಖಂಡರು ಭಾಗವಹಿಸಿದ್ದರು.

ಚಿತ್ರ ೨೬ ಕೆ.ಎಲ್.ಆರ್. ೦೪ : ಕೋಲಾರದ ಕೆಇಬಿ ಸಮುದಾಯ ಭವನದಲ್ಲಿ ಶಿಕ್ಷಕ ಗೆಳೆಯರ ಬಳಗದಿಂದ ನಡೆದ ಜಿಲ್ಲಾ ಮಟ್ಟದ ಸಾವಿತ್ರಿಬಾಯಿ ಫುಲೆ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ಶಿಕ್ಷಕಿಯರನ್ನು ಬೆಂಗಳೂರು ಡಿಸಿಪಿ ದೇವರಾಜ್ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net