ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

ಪಿರಿಯಾಪಟ್ಟಣ ತಾಲೂಕು ಅತ್ತಿಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಉದ್ಘಾಟಿಸಿದರು. ಮಮತಾ, ರಾಮಚಂದ್ರ, ಅಶೋಕ್, ಮಹದೇವಪ್ಪ, ಶಿವಮೂರ್ತಿ, ಮಂಜುಳಾ, ಹರೀಶ್, ರುದ್ರೇಶ್, ರಮೇಶ್, ಶೇಖರ್ ಇತರರಿದ್ದರು.
WhatsApp Image 2022-09-08 at 6.14.19 PM
Published on

ರಾವಂದೂರು: ಮಕ್ಕಳಲ್ಲಿ ಗೌಪ್ಯವಾಗಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ತಿಳಿಸಿದರು.


ಪಿರಿಯಾಪಟ್ಟಣ ತಾಲೂಕು ಅತ್ತಿಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿ, ಒಂದೊಂದು ಮಗುವಿನಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದುದು ಪಾಲಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಮಕ್ಕಳು ಕಳೆದ ಎರಡು ವರ್ಷಗಳಿಂದ ಕರೊನಾ ಸಂಕಷ್ಟದಿಂದಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಕುಂಠಿತವಾಗಿದ್ದವು. ಆದರೆ ಈ ಬಾರಿ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಮೂಲಕ ಈ ಕಾರ್ಯಕ್ರಮವು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಸಹಕಾರಿಯಾಗಿದೆ ಎಂದರು.


ಈ ಬಾರಿ ನಡೆಯುತ್ತಿರುವ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕ್ರೀಡಾಕೂಟವು ಒಂದಕ್ಕಿಂತ ಒಂದು ವಿಭಿನ್ನವಾಗಿ ಕಾರ್ಯಕ್ರಮವನ್ನು ರೂಪಿಸುವ ಮೂಲಕ ವಿದ್ಯಾರ್ಥಿಗಳ ಕ್ರೀಡೆ, ಸಾಂಸ್ಕೃತಿಕ ಮತ್ತು ಜಾನಪದ ಮತ್ತು ಪಠ್ಯ ಚಟುವಟಿಕೆಗಳಿಗೆ ಪೂರಕ ವಾತಾವರಣವನ್ನು ಕಲ್ಪಿಸುವ ಮೂಲಕ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.


ವೈದ್ಯಾಧಿಕಾರಿ ಮಮತಾ ಮಾತನಾಡಿ, ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದು ಪ್ರತಿಯೊಬ್ಬ ಸರ್ಕಾರಿ ನೌಕರರಾಗಲಿ, ಪಾಲಕರಾಗಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಸಲುವಾಗಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು. ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಉತ್ತಮ ನುರಿತ ಶಿಕ್ಷಕರು ಇದ್ದು, ಮಕ್ಕಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುವುದರ ಜತೆಗೆ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿ ಆದರ್ಶ ಪ್ರಜೆಗಳಾಗಲು ಶಿಕ್ಷಕರ ಶ್ರಮ ಬಹಳ ಮುಖ್ಯ ಎಂದು ತಿಳಿಸಿದರು.


ಕಾರ್ಯಕ್ರಮದ ನಿಮಿತ್ತ ಕ್ಲಸ್ಟರ್‌ನ ಶಿಕ್ಷಕ, ಶಿಕ್ಷಕಿಯರು ಒಂದೇ ರೀತಿಯ ಸಮವಸ್ತ್ರ ಧರಿಸುವ ಮೂಲಕ ಬಂದಂತಹ ಅತಿಥಿಗಳು ಮತ್ತು ಪಾಲಕರ ಮೆಚ್ಚುಗೆಗೆ ಪಾತ್ರರಾಗುವುದರ ಜತೆಗೆ ಬಂದಂತಹ ಮಕ್ಕಳು, ಪಾಲಕರು, ಶಿಕ್ಷಕರು ಹಾಗೂ ಅತಿಥಿಗಳಿಗೆ ಹೋಳಿಗೆ ಊಟವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು, ದಾನಿಗಳು, ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರನ್ನು ಸನ್ಮಾನಿಸಲಾಯಿತು.


ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷ ಅಶೋಕ್, ಕಾರ್ಯದರ್ಶಿ ಮಹದೇವಪ್ಪ, ಬಳಕೆದಾರರ ಸಂಘದ ಅಧ್ಯಕ್ಷ ಶಿವಮೂರ್ತಿ, ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಹರೀಶ್, ಸದಸ್ಯರಾದ ರುದ್ರೇಶ್, ಶೇಖರ್, ರಮೇಶ್, ಮುರುಳೀಧರ್, ಸುಬ್ರಮಣ್ಯ, ಪಾಲಾಕ್ಷ, ಪ್ರೌಡಶಾಲಾ ಮುಖ್ಯಶಿಕ್ಷಕ ನಾಗಶೆಟ್ಟರು, ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜು, ಇಸಿಒ ಗಣೇಶ್, ಬಿಆರ್‌ಪಿ ಶ್ರೀನಿಧಿ, ಸಿಆರ್‌ಪಿಗಳಾದ ನಾಗೇಶ್, ನಟರಾಜು, ಗುರುರಾಘವೇಂದ್ರ, ಸೋಮಶೇಖರ್, ಮುಖ್ಯ ಶಿಕ್ಷಕ ಅರುಣ್, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ್, ಮಹೇಶ್, ನವೀನ್, ಹರೀಶ್, ವಿಎಸ್‌ಎಸ್‌ಎನ್ ಅಧ್ಯಕ್ಷ ಚಂದ್ರಹಾಸ್, ಪಿಡಿಒ ಮನು ಸೇರಿದಂತೆ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net