

ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
ಒಪ್ಪತ್ತಿನ ಊಟಕ್ಕಾಗಿ ದೂರದ ಬೆಂಗಳೂರಿಗೆ ಗುಳೆ ಹೋಗುವ ಉತ್ತರ ಕರ್ನಾಟಕ ಜಿಲ್ಲೆಗಳ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಖ್ಯೆ ರಾಜಧಾನಿಯಲ್ಲಿ ಎಷ್ಟಿದೆ ಎಂಬ ಬಗ್ಗೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಅಂಕಿ-ಸಂಖ್ಯೆ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.
ಬೆಂಗಳೂರು ಮಹಾನಗರದಲ್ಲಿ ಉಕ ಜಿಲ್ಲೆಗಳಿಂದ ವಲಸೆ ಬರುವ ಕಾರ್ಮಿಕರ ಸಮೀಕ್ಷೆ ನಡೆಸಿಲ್ಲ. ಎಷ್ಟು ಫಲಾನುಭವಿಗಳಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಸ್ವತಃ ಮಂಡಳಿ ಒಪ್ಪಿಕೊಂಡಿದ್ದು ವಿಚಿತ್ರವೆನಿಸಿದೆ. ಅಂದಾಜಿನ ಪ್ರಕಾರ ರಾಜ್ಯ ರಾಜಧಾನಿಯಲ್ಲಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳಲ್ಲಿ ಶೇ.25 ಉತ್ತರ ಮತ್ತು ಕಲ್ಯಾಣ ಕನರ್ಾಟಕದ ಕಾರ್ಮಿಕರೇ ದುಡಿಯುತ್ತಿದ್ದಾರೆ. ಕೆಲಸದ ವೇಳೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದಂಥ ಪ್ರಕರಣ ಸಹ ವರದಿಯಾಗಿವೆ.
ಇನ್ನು ಕಟ್ಟಡ ನಿರ್ಮಾಣ ವೇಳೆ ಅಚಾತುರ್ಯದಿಂದಾಗಿ ಪ್ರಾಣ ಕಳೆದುಕೊಂಡವರು ಸಹ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಈ ಬಗ್ಗೆ ಸಮಗ್ರ ಮಾಹಿತಿ ಹೊಂದಿಸುವ ಮಹತ್ತರ ಜಿಮ್ಮೇದಾರಿ ಹೊತ್ತ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರಿಗೆ ಗುಳೆ ಬಂದವರ ಸಮೀಕ್ಷೆ ನಡೆಸಿಲ್ಲ ಎಂದು ಹೇಳಿರುವುದು ದುರಂತ. ಕೆಲಸದ ಸ್ಥಳದಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳ ಶೇ.59.09 ಮಹಿಳೆಯರಿಗೆ ಮೌಖಿಕ, ಶೇ.9.09 ದೈಹಿಕ ಹಾಗೂ ಶೇ.1.51 ಲೈಂಗಿಕ ಕಿರುಕುಳ ನೀಡಿದ ಪ್ರಸಂಗಗಳು ನಡೆದಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ವಾರ್ಷಿಕ 76 ಸಾವಿರದಿಂದ ಒಂದು ಲಕ್ಷ ರೂ.ವರೆಗೆ ಆದಾಯ ಹೊಂದಿರುವ ಶೇ.30.58 ಮಹಿಳಾ ಕಾರ್ಮಿಕರಿದ್ದಾರೆ. ಅಲ್ಲದೆ ತಮ್ಮೂರಿನಿಂದ ಬೆಂಗಳೂರಿಗೆ ತರಳಿದ ಶೇ.73.53 ಮಹಿಳೆ ಮತ್ತು ಶೇ.78.99 ಪುರುಷರಿಗೆ ಕೆಲಸ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ಅಚ್ಚರಿ ಎಂದರೆ ಬೆಂಗಳೂರಿನಲ್ಲಿರುವ ಉತ್ತರ ಕನರ್ಾಟಕದ ಶೇ.68.85 ವಲಸೆ ಕಾರ್ಮಿಕರು ಕಟ್ಟಡ ಕಾರ್ಮಿಕ ಪಾಸ್ಬುಕ್ ಹೊಂದಿಲ್ಲ.
ರಾಜ್ಯ ಮೌಲ್ಯಮಾಪನ ಪ್ರಾಧಿಕಾರದ ಮಾಹಿತಿ ಪ್ರಕಾರ, ಬೆಂಗಳೂರು ಮಹಾ ನಗರದಲ್ಲಿ ವಾಸಿಸುವ ಅಂತರ ಜಿಲ್ಲಾಕ್ಕಿಂತ ಅಂತಾರಾಜ್ಯ ವಲಸಿಗರ ಮಕ್ಕಳ ಶಿಕ್ಷಣ ಗುಣಮಟ್ಟ ಉತ್ತಮವಾಗಿದೆ. ಶೇ.95.77 ಯಾದಗಿರಿ ಮತ್ತು ಕೊಪ್ಪಳ ವಲಸೆ ಕಾರ್ಮಿಕರ ಕುಂದುಕೊರತೆ ನಿವಾರಣೆಗೆ ಸಿದ್ಧತೆ ಕೈಗೊಂಡರೆ, ಗೋವಾದಲ್ಲಿರುವ ಬೆಳಗಾವಿ ಮತ್ತು ಉತ್ತರ ಕನ್ನಡದ ಶೇ.96.07 ವಲಸಿಗರಿಗೆ ಕಲ್ಯಾಣ ಮಂಡಳಿ ಸೌಲಭ್ಯ ಸಿಕ್ಕಿಲ್ಲ.