ಮಂಗಳೂರು: ಇಲ್ಲಿನ ಅಂ.ರಾ. ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದ 67 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ದುಬಾಯಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಸ್ಪೈಸ್ ಜೆಟ್‌ನಲ್ಲಿ ಪ್ರಯಾಣಿಸಿದ್ದ ಇಬ್ಬರ ಬಳಿಯಿಂದ 1.2 ಕಿ.ಗ್ರಾಂ. ಚಿನ್ನ ಪತ್ತೆಯಾಗಿದೆ. ಭಟ್ಕಳದ ನಿವಾಸಿ ಬಾಲ್‌ಗಳಲ್ಲಿ ಚಿನ್ನದ ಪೌಡರ್ ತುಂಬಿಸಿ ಪೃಷ್ಠದಲ್ಲಿಟ್ಟು ಸಾಗಾಟ ಮಾಡಿದ್ದ. ಈತನಿಂದ 641 ಗ್ರಾಂ ಹಾಗೂ ಇನ್ನೋರ್ವ ಕೇರಳದ ಕಾಸರಗೋಡಿನ ನಿವಾಸಿಯಿಂದ 646 ಗ್ರಾಂ ಚಿನ್ನದ ಪೇಸ್ಟ್‌ನ್ನು ಒಳಚಡ್ಡಿಯಲ್ಲಿಟ್ಟು ಸಾಗಾಟ ಮಾಡಿದ್ದ. ಒಟ್ಟು 1.2 ಕಿ.ಗ್ರಾಂ. ಚಿನ್ನ ಪತ್ತೆ ಮಾಡಲಾಗಿದೆ. ಲಾಕ್‌ಡೌನ್ ಪ್ರಕ್ರಿಯೆಯಿಂದಾಗಿ ಅಕ್ರಮ ಚಿನ್ನ ಸಾಗಾಟ ಪ್ರಕರಣ ಹೆಚ್ಚಾಗಿದೆ. ಬಂಧಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.