ಮ.ಬೆಟ್ಟದಲ್ಲಿ ಮದ್ಯ ಮಾರಾಟ ತಡೆಯಿರಿ

ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಚಂದ್ರಶೇಖರ್, ಉಮೇಶ್, ನಂಜುಂಡಸ್ವಾಮಿ, ಸುನೀಲ್, ಕಿರಣ್ ಇತರರು ಇದ್ದರು.
ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಚಂದ್ರಶೇಖರ್, ಉಮೇಶ್, ನಂಜುಂಡಸ್ವಾಮಿ, ಸುನೀಲ್, ಕಿರಣ್ ಇತರರು ಇದ್ದರು.
Published on

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾವಿತ್ರ್ಯತೆ ಕಾಪಾಡುವ ಸಲುವಾಗಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.

ಮ.ಬೆಟ್ಟದ ನಾಗಮಲೆ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಾಧಿಕಾರ ಹಾಗೂ ಇತರೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಮ.ಬೆಟ್ಟ ಶ್ರೀ ಮಹದೇಶ್ವರರು ನೆಲೆಸಿರುವ ಧಾರ್ಮಿಕ ಪುಣ್ಯ ಕ್ಷೇತ್ರ. ತನ್ನದೆ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದ್ದು, ಕೋಟ್ಯಂತರ ಭಕ್ತರನ್ನು ಒಳಗೊಂಡಿದೆ. ಹಾಗಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಈ ಹಿಂದೆ ಇಲ್ಲಿ ಮದ್ಯ ಮಾರಾಟ ಕನಸಿನ ಮಾತಾಗಿತ್ತು. ಆದರೆ, ಇತ್ತೀಚೆಗೆ ಮದ್ಯ ಮಾರಾಟ ಹೆಚ್ಚಾಗುತ್ತಿದೆ. ಈ ಬಗ್ಗೆ ಪ್ರಕರಣಗಳು ದಾಖಲಾಗುತ್ತಿದ್ದು, ಇದರಿಂದ ಮ.ಬೆಟ್ಟದ ಪಾವಿತ್ರ್ಯಕ್ಕೆ ಧಕ್ಕೆಯಾಗಲಿದೆ. ಆದ್ದರಿಂದ, ಈ ಬಗ್ಗೆ ಕೂಡಲೇ ಅಗತ್ಯ ಕ್ರಮವಹಿಸಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು . ಈ ಸಂಬಂಧ ಅಲ್ಲಲ್ಲಿ ನಾಮಫಲಕ ಅಳವಡಿಸಬೇಕು. ಜತೆಗೆ ಮ.ಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿಸಬೇಕು. ಈ ಬಗ್ಗೆ ಭಕ್ತರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಖಾಸಗಿ ವಸತಿಗೃಹಗಳಿಗೆ ಆಗಾಗ ಭೇಟಿ ನೀಡಿ ಪರಿಶೀಲಿಸುವುದರ ಮೂಲಕ ಅಕ್ರಮ ತಡೆಗಟ್ಟಬೇಕು ಎಂದು ಸೂಚಿಸಿದರು.

ಮ.ಬೆಟ್ಟದಲ್ಲಿ ಹಂದಿಗಳ ಹಾವಳಿ ಹೆಚ್ಚಿದ್ದು, ಭಕ್ತರು ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಹಂದಿಗಳ ಹಾವಳಿಯನ್ನು ತಡೆಗಟ್ಟುವುದರ ಮೂಲಕ ಭಕ್ತರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ಮ.ಬೆಟ್ಟದ ತಪ್ಪಲಿನಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವುದರ ಜತೆಗೆ ಅಂಗನವಾಡಿ ಕೇಂದ್ರಕ್ಕೆ ಮೂಲಸೌಕರ್ಯ ಒದಗಿಸಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಕಾಧಿಕಾರಿ ಉಮೇಶ್, ಪಿಡಿಒ ಕಿರಣ್, ಇನ್ಸ್‌ಪೆಕ್ಟರ್ ನಂಜುಂಡಸ್ವಾಮಿ, ಅಬಕಾರಿ ನಿರೀಕ್ಷಕ ಸುನೀಲ್, ಪ್ರಾಧಿಕಾರದ ನೌಕರರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net