

ರಾಜ್ಯ ಸರ್ಕಾರ ತನ್ನ ಭ್ರಷ್ಟಾಚಾರ, ವೈಫಲ್ಯಗಳನ್ನು ಮುಚ್ಚಿಸಿಕೊಳ್ಳಲು ಸಾಧನಾ ಸಮಾವೇಶ ನಡೆಸುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಮುಡಾ ಪ್ರಕರಣದಲ್ಲಿ ಎಷ್ಟು ಸಾವಿರ ಕೋಟಿ ರೂ. ನಷ್ಟವಾಗಿದೆ. ನೀವು ಮತ್ತು ನಿಮ್ಮ ಕುಟುಂಬ ಎಷ್ಟು ಕೋಟಿ ಹೊಡೆದಿದ್ದೀರಾ ಎಂಬುದನ್ನು ಸಮಾವೇಶದಲ್ಲಿ ಜನರ ಮುಂದೆ ಹೇಳಬೇಕು. ಇಲ್ಲದಿದ್ದರೆ ಇದನ್ನೆಲ್ಲಾ ನಾವೇ ಹೇಳಲು ಮೈಸೂರಿನಲ್ಲಿ ಸಮಾವೇಶ ಮಾಡುತ್ತೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಜನರಿಗೆ ಸುಳ್ಳು ಹೇಳಿ ಟೋಪಿ ಹಾಕಲು ಸಾಧನಾ ಸಮಾವೇಶ ಹಮ್ಮಿಕೊಂಡಿದ್ದಾರೆ. ಆದರೆ, ಮುಖ್ಯಮಂತ್ರಿ ಮೈಸೂರಿಗೆ ಏನು ಕೊಟ್ಟಿದ್ದಾರೆ ಎಂದು ಹೇಳಬೇಕು. ಬೆಂಗಳೂರಿನಿಂದ ಮೈಸೂರು, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೆಲಿಕಾಪ್ಟರ್ನಲ್ಲಿ ತಿರುಗಾಡಲು ಎಷ್ಟು ಕೋಟಿ ರೂ. ವ್ಯಯ ಮಾಡಲಾಗಿದೆ? ನಿಮ್ಮ ಕಟು ನುಡಿಗಳಿಂದ ಸತ್ತ ಅಧಿಕಾರಿಗಳು ಎಷ್ಟು ಎಂದು ಪ್ರಶ್ನಿಸಿದರು.
ಸರ್ಕಾರ ವಾರ್ಷಿಕವಾಗಿ ಮಾಡಿರುವ ಸಾಧನೆಯನ್ನು ವಿಧಾನಸೌಧದಲ್ಲಿ ಹೇಳಬೇಕು. ಆದರೆ, ಜನರ ತೆರಿಗೆ ಹಣದಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ತಮ್ಮ ನಾಲ್ಕೈದು ಚಮಚಾಗಳು, ಭಟ್ಟಂಗಿಗಳ ಕೈಯಲ್ಲಿ ಬೆಸ್ಟ್ ಬಜೆಟ್ ಮಂಡಿಸಿದ್ದಾರೆ ಎಂದು ಹೇಳಿಸಿಕೊಳ್ಳುವ ಚಾಳಿ ಸಿದ್ದರಾಮಯ್ಯ ಅವರದು ಎಂದು ಟೀಕಿಸಿದರು.
ಮುಖ್ಯಮಂತ್ರಿ, ಎಲ್ಲ ಸಚಿವರು, ಶಾಸಕರು ತಮ್ಮ ಆಸ್ತಿಯನ್ನು ಸಮಾವೇಶದಲ್ಲಿ ಬಹಿರಂಗಪಡಿಸಬೇಕು. ಜನರಿಗೆ ಖಾತೆ ಮಾಡುತ್ತೇವೆ. ಪಹಣಿ ಕೊಡುತ್ತೇವೆ. ಬಗರ್ಹುಕುಂ ಕೊಡ್ತೀವಿ ಎನ್ನುವುದನ್ನು ಹೇಳಲು ಸಮಾವೇಶ ಮಾಡಬೇಕಾ ಎಂಸು ಪ್ರಶ್ನಿಸಿದರು.
ಜಿಲ್ಲಾ ಮಂತ್ರಿಗಳು ಬರೀ ವರ್ಗಾವಣೆ, ಕಮಿಷನ್ ಪಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಾಧನಾ ಸಮಾವೇಶ ಮಾಡುವ ಮೊದಲು ಎಲ್ಲ ಪಕ್ಷದವರನ್ನು ಕರೆದು ಸಾಧನೆ ಬಗ್ಗೆ ಮಾಹಿತಿ ಕೊಡಬೇಕು. ನಿಮಗೂ ಮತ್ತು ಬಿಜೆಪಿ ಪಕ್ಷ ಎರಡಕ್ಕೂ ವ್ಯತ್ಯಾಸ ಇಲ್ಲವೇ? ಬಿ.ಎಸ್.ಯಡಿಯೂರಪ್ಪ ಜಿಂದಾಲ್ ಗಣಿ ಕಂಪನಿಗೆ ಭೂಮಿ ಔಟ್ಲೇಟ್ ಸೇಲ್ ಮಾಡುವ ಸಮಯಲ್ಲಿ ತಾವು ಪ್ರೆಸ್ಮೀಟ್ ಮಾಡಿದ ನಂತರ ಅದನ್ನು ನಿಲ್ಲಿಸಿದ್ದೆವು. ಮೂರು ತಿಂಗಳಲ್ಲಿ ಸಿದ್ದರಾಮಯ್ಯ ಏನು ಮಾಡಿದ್ದಾರೆ. ಕಿಕ್ ಬ್ಯಾಕ್ ತೆಗೆದುಕೊಂಡು ಅದೇ ಕೆಲಸ ಮಾಡಿದ್ದಾರೆ. ನಿಮಗೂ ಮತ್ತು ಗಾಲಿ ಜನಾರ್ದನ ರೆಡ್ಡಿಗೂ ಏನು ವ್ಯತ್ಯಾಸ. ಎಲ್ಲ ಪಾರ್ಟಿಯವರು ಸೇರಿಕೊಂಡು ರಾಜ್ಯವನ್ನು ಧೂಳಿಪಟ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಹೆಲಿಕಾಪ್ಟರ್ನಲ್ಲಿ ಬರುತ್ತಾರೆ, ಹೋಗುತ್ತಾರೆ. ಜನರು ಭೇಟಿ ಮಾಡಲು ಆಗುತ್ತಿಲ್ಲ. ಸಮಸ್ಯೆಗಳನ್ನು ಹೇಳಲು ಆಗುತ್ತಿಲ್ಲ. ಈ ಹಿಂದೆ ಬಿಜೆಪಿಯವರು ಸುಳ್ಳು ಹೇಳಿ ಮನೆಗೆ ಹೋದರು. ನೀವು ಆದಷ್ಟು ಬೇಗ ಮನೆಗೆ ಹೋಗುತ್ತೀರಾ ಎಂದು ಭವಿಷ್ಯ ನುಡಿದರು.
ಸೈಟ್ಗಳ ಬೆಲೆ ಏರಿಕೆಗೆ ಗ್ರೇಟರ್ ಬೆಂಗಳೂರು:
ಗ್ರೇಟರ್ ಬೆಂಗಳೂರು ಮಾಡಿದ್ದು ಏತಕ್ಕಾಗಿ ಎಂಬುದು ಗೊತ್ತಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆೆ ಹೇಳಿ ಕೊಡಬೇಕಾ? ಸೈಟ್ಗಳ ಬೆಲೆಗಳು ಏರುತ್ತದೆ ಅಷ್ಟೇ ಹೊರತು ಬೇರೇನೂ ಪ್ರಯೋಜನವಿಲ್ಲ. ಮೈಸೂರು ಸಹ ಗ್ರೇಟರ್ ಮಾಡಲು ಹೊರಟಿದ್ದರು. ವ್ಯಾಪಾರ ಇನ್ನೂ ಆಗಿಲ್ಲ. ಆದಷ್ಟು ಬೇಗ ಮಾಡುತ್ತಾರೆ ಎಂದು ಕುಟುಕಿದರು.
ಸಿದ್ದರಾಮಯ್ಯ ಅವರಿಗೆ ಅವರ ಸಮಾಜದ ಜನರು ತನು, ಮನ, ಧನ ಸಹಾಯ ಮಾಡಿದರು. ಆದರೆ, ಅವರು ಕುರುಬರಿಗೆ ಏನು ಮಾಡಿದ್ದಾರೆ. ಹಿಂದುಳಿದ ವರ್ಗಗಳ ಜನರಿಗೆ ಏನು ಮಾಡಿದ್ದಾರೆ. ಭೈರತಿ ಸುರೇಶ್ ಒಬ್ಬ ಹಿಂದುಳಿದ ವರ್ಗದ ಮಂತ್ರಿ ಇದ್ದಾನೆ. ನಾನು ಏನಾದರೂ ಹೇಳಿದರೆ ಅವನೇ ನನ್ನ ಮೇಲೆ ಕೇಸ್ ಹಾಕುತ್ತಾನೆ. ಗ್ಯಾರಂಟಿ ಯೋಜನೆಗಳಿಗಾಗಿ 96 ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳು ನಡೆಯುತ್ತಿಲ್ಲ. ಶ್ರೀರಾಮ ಸಕ್ಕರೆ ಕಾರ್ಖಾನೆ, ಮಂಡ್ಯ ಕಾರ್ಖಾನೆಗಳು ಮುಚ್ಚಿ ಹೋಗಿದೆ ಎಂದರು.