

ಮೈಸೂರು: ಸಾಹಿತಿ ಎಸ್.ಎಲ್.ಭೈರಪ್ಪನವರ ಪ್ರತಿ ಕಾದಂಬರಿ, ಕೃತಿಗಳಲ್ಲೂ ವಿಶೇಷತೆ, ವಿಭಿನ್ನತೆ ಇದೆ. ಅವರು ಈ ನಾಡು ಕಂಡಂತಹ ಶ್ರೇಷ್ಠ ಚಿಂತಕರು, ದಾರ್ಶನಿಕರು, ಬರಹಗಾರರು ಎಂದು ಮಾಜಿ ಉಪ ಮೇಯರ್ ವಿ.ಶೈಲೇಂದ್ರ ತಿಳಿಸಿದ್ದಾರೆ.
ಭೈರಪ್ಪನವರ ಕಾದಂಬರಿಗಳನ್ನು ನಾನು ಚಿಕ್ಕ ವಯಸ್ಸಿನಿಂದಲೇ ಓದುತ್ತ ಬಂದಿದ್ದೇನೆ. ಸಹಜವಾಗಿ ನಡೆದಿರುವ ಘಟನೆಗಳನ್ನು ತಮ್ಮ ಕೃತಿಯ ಮೂಲಕ ಮನೋಜ್ಞವಾಗಿ ಚಿತ್ರಿಸಿ ಅವರು ಓದುಗರ ಮುಂದಿಡುತ್ತಿದ್ದರು. ಅವರ ಪ್ರತೀ ಕೃತಿಯೂ ಅತ್ಯಂತ ಆಳವಾದ ಅಧ್ಯಯನ ಶೀಲತೆಯನ್ನು ಬಿಂಬಿಸುತ್ತವೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮತದಾನ ಕಾದಂಬರಿ ಜಾತಿ ಆಧಾರಿತ ರಾಜಕೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಹಿಡಿತದ ಬಗ್ಗೆ ವಿವರಿಸಿದೆ. ಅವರ ಯಾವುದೇ ಕೃತಿಯನ್ನು ಅಧ್ಯಯನ ಮಾಡಿದರೆ ಒಂದು ಹೊಸ ಜಗತ್ತಿನ ಪರಿಚಯವಾದಂತೆ ಭಾಸವಾಗುತ್ತದೆ. ಅವರ ಮತ್ತೊಂದು ವಿಶೇಷತೆ ಏನೆಂದರೆ ಅವರ ಕೃತಿಗಳು ಹೆಚ್ಚು ಚರ್ಚೆಗೆ ಒಳಪಡುತ್ತಿದ್ದವು. ಅಂತಹ ಸಾಹಿತ್ಯ ದಿಗ್ಗಜರ ನಿಧನ ನಾಡಿಗೆ ತುಂಬಲಾರದ ನಷ್ಟವೇ ಸರಿ ಎಂದು ಅವರು ತಿಳಿಸಿದ್ದಾರೆ.