ಭೂ ಪರಿವರ್ತನೆ ವೇಳೆ ಕಿರುಕುಳ, ಅನಗತ್ಯ ವಿಳಂಬ ಬೇಡ

Siddaramaiah
Published on

ಬೆಂಗಳೂರು: ನಗರ ಪ್ರದೇಶಗಳಲ್ಲಿ ಮಾಸ್ಟರ್ ಪ್ಲಾನ್ ಕಾಲದಿಂದ ಕಾಲಕ್ಕೆ ನವೀಕರಿಸಬೇಕು. ಆದಷ್ಟು ಬೇಗನೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು. ಮ್ಯುಟೇಶನ್, ಭೂ ಪರಿವರ್ತನೆ ಪ್ರಕರಣಗಳಲ್ಲಿ ಜನಸಾಮಾನ್ಯರಿಗೆ ಯಾವುದೇ ಕಿರುಕುಳ, ಅನಗತ್ಯ ವಿಳಂಬವಾಗದಂತೆ ಎಚ್ಚರಿಕೆ ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ.

ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಭೂ ಪರಿವರ್ತನೆ ಸಂಪೂರ್ಣ ಪ್ರಕ್ರಿಯೆಯನ್ನು ಒಂದು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು, ಮಾಸ್ಟರ್ ಪ್ಲಾನ್ ಆದ ಕಡೆ ಮತ್ತೆ ಭೂ ಪರಿವರ್ತನೆ ಅಗತ್ಯವಿಲ್ಲ ಎಂದು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಈ ಕುರಿತು ಆದೇಶವನ್ನು ಆದಷ್ಟು ಬೇಗನೆ ಹೊರಡಿಸಲು ಇದೇ ವೇಳೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಜತೆಗೆ ಹಲವು ವರ್ಷಗಳಿಂದ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿರುವ ರೈತರಿಂದ ಆ ಜಮೀನು ಸ್ವಾಧೀನಪಡಿಸುವ ಸಂದರ್ಭದಲ್ಲಿ ಎಕ್ಸೃ್ ಗ್ರೇಷಿಯಾ ನೀಡುವ ಬಗ್ಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಸಿಎಂ ನಿರ್ದೇಶನ ನೀಡಿದ್ದಾರೆ.

ಎಸಿಗಳಿಗೆ ಎಚ್ಚರಿಕೆ

ಕಂದಾಯ ನ್ಯಾಯಾಲಯಗಳಲ್ಲಿ 10 ವರ್ಷ, 5 ವರ್ಷ ಕ್ಕೂ ಅಧಿಕ ಅವಧಿಯಿಂದ ಬಾಕಿ ಇದ್ದ ಮುಕ್ಕಾಲು ಪ್ರಕರಣಗಳಿಗೆ ಒಂದೂವರೆ ವರ್ಷದಲ್ಲಿ ಮುಕ್ತಿ ಸಿಕ್ಕಿದೆ. ನಮ್ಮ ಸರ್ಕಾರ ಬಂದಾಗ 10 ಸಾವಿರಕ್ಕೂ ಮಿಕ್ಕಿ ಅವಧಿ ಮೀರಿದ ಪ್ರಕರಣಗಳು ಇದ್ದವು. ಈಗ ಕೇವಲ 369 ಪ್ರಕರಣಗಳು ಮಾತ್ರ ತಹಶೀಲ್ದಾರ್ ನ್ಯಾಯಾಲಯಗಳಲ್ಲಿವೆ ಎಂದು ಸಚಿವ ಕೃಷ್ಣಬೈರೇಗೌಡ ಸಿಎಂಗೆ ದಾಖಲೆ ಸಮೇತ ವಿವರಿಸಿದರು.

ತಹಶೀಲ್ದಾರ್, ಡಿಸಿ ಕೋರ್ಟ್‌ಗಳಲ್ಲಿ ಪ್ರಕರಣಗಳು ಸಮರೋಪಾದಿಯಲ್ಲಿ ವಿಲೇವಾರಿ ಆಗುತ್ತಿದೆ. ಆದರೆ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ ವಿಲೇವಾರಿ ವೇಗ ಕಡಿಮೆ ಇರುವುದನ್ನು ತಾಂತ್ರಿಕ  ಕಾರಣಗಳ ಸಮೇತ ಸಚಿವರು ಇದೇ ವೇಳೆ ವಿವರಿಸಿದರು.

ಕಂದಾಯ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು. ವಿಳಂಬಕ್ಕೆ ಅವಕಾಶ ಇರಬಾರದು. ಇದನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಉಪವಿಭಾಗಾಧಿಕಾರಿ ನ್ಯಾಯಾಲಯಗಳ ಕಾರ್ಯವೈಖರಿ ಸುಧಾರಿಸಬೇಕು. ಈ ಬಗ್ಗೆ ಉಪ ವಿಭಾಗಾಧಿಕಾರಿಗಳಿಗೆ ಕೊನೆಯ ಎಚ್ಚರಿಕೆ ಕೊಡಿ ಎಂದು ಸಿಎಂ ತಾಕೀತು ಮಾಡಿದರು.

ಬರೀ ಕ್ವಾಂಟಿಟಿ ವಿಲೇವಾರಿ ಸಾಲದು, ಕ್ವಾಲಿಟಿ ವಿಲೇವಾರಿ ಆದರೆ ಮಾತ್ರ ಮೇಲ್ಮನವಿಗಳಿಗೆ ಬ್ರೇಕ್ ಬೀಳುತ್ತದೆ. ಈ ದಿಕ್ಕಲ್ಲಿ ಹೆಚ್ಚಿನ ಗಮನ ಹರಿಸಿ ಎಂದು ಸಚಿವ ಕೃಷ್ಣಬೈರೇಗೌಡರಿಗೆ ಸಿಎಂ ಸೂಚಿಸಿದರಲ್ಲದೇ, ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಮೂರ ತಿಂಗಳ ಒಳಗಾಗಿ ಪ್ರಕರಣಗಳ ವಿಲೇವಾರಿ ಮಾಡಬೇಕು ಎಂದರು.

ನಮ್ಮ ಸರ್ಕಾರ ಬಂದಾಗ 10 ಸಾವಿರಕ್ಕೂ ಮಿಕ್ಕಿ ಅವಧಿ ಮೀರಿದ ಪ್ರಕರಣಗಳು ಇದ್ದವು. ಈಗ ಕೇವಲ 369 ಪ್ರಕರಣಗಳು ಮಾತ್ರ ತಹಶೀಲ್ದಾರ್ ನ್ಯಾಯಾಲಯಗಳಲ್ಲಿವೆ. ಪ್ರಕರಣಗಳ ವಿಲೇವಾರಿ ತ್ವರಿತಗೊಳಿಸುವ ಜತೆಗೆ ನ್ಯಾಯದಾನದ ಗುಣಮಟ್ಟ ಸಹ ಸುಧಾರಿಸಬೇಕು. ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಶೇ.65 ಪ್ರಕರಣಗಳಲ್ಲಿ ಒಂದು ದಿನದ ಒಳಗಾಗಿ ಮಾಡಲಾಗುತ್ತಿರುವುದು ಒಳ್ಳೆಯ ಸಂಗತಿ. ಅಟೋ ಮ್ಯುಟೇಶನ್ ಮೂಲಕ ಇದು ಸಾಧ್ಯವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಜಮೀನುಗಳ ಖಾತೆ ಇನ್ನೂ ನಿಧನ ಹೊಂದಿದವರ ಹೆಸರಿನಲ್ಲಿಯೇ ಇದೆ. ಪೌತಿ ಖಾತೆ ಅಭಿಯಾನ ತ್ವರಿತಗೊಳಿಸಬೇಕು ಎಂದು ಸಿಎಂ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net