ಭುವನಹಳ್ಳಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ

BTP21Photo2
ಕುಂಬಾರ ಜನಾಂಗದವರು ಭುವನಹಳ್ಳಿ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
Published on

ಬೆಟ್ಟದಪುರ: ಸಮೀಪದ ಭುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಣಸೂರು ಗ್ರಾಮದ ಕುಂಬಾರ ಜನಾಂಗದವರಿಗೆ ಸೇರಿದ ಶ್ರೀ ಅಂಕನಾಥೇಶ್ವರ ದೇವಸ್ಥಾನದ ಹಿಂಭಾಗದ ಜಾಗವನ್ನು ಅಕ್ರಮವಾಗಿ ಮೇದ ಜನಾಂಗಕ್ಕೆ ಖಾತೆ ಮಾಡಿಸಿಕೊಡಲಾಗಿದೆ ಎಂದು ಆರೋಪಿಸಿ ಕುಂಬಾರ ಜನಾಂಗದವರು ಬುಧವಾರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.


ಭೀಮ್ ಆರ್ಮಿ ಪದಾಧಿಕಾರಿ ಗಿರೀಶ್ ಮಾತನಾಡಿ, ಕುಂಬಾರ ಜನಾಂಗದವರಿಗೆ ಸೇರಿದ ಆ ಜಾಗದಲ್ಲಿ ಮಣಿಯಮ್ಮ ಅಂಕನಾಥೇಶ್ವರ ದೇವಾಲಯ ಇರುವುದರಿಂದ ಪೂರ್ವಜರ ಕಾಲದಿಂದಲೂ ಪೂಜಾ ಕೈಂಕರ್ಯ ಮಾಡಲಾಗುತ್ತಿದೆ. ಅಲ್ಲದೆ ದೇವಾಲಯ ಬಳಿ ಮದುವೆ, ನಾಮಕರಣ, ಹಬ್ಬ ಆಚರಣೆ ಮಾಡಲಾಗುತ್ತಿದೆ. ದೇವಸ್ಥಾನದ ಹಿಂಭಾಗದ ಜಾಗದಲ್ಲಿ ಶೌಚಗೃಹ, ಮಹಿಳೆಯರಿಗಾಗಿ ಸ್ನಾನದ ಮನೆ, ಕಸದ ತೊಟ್ಟಿ ಹಾಗೂ ನೀರಿನ ತೊಟ್ಟಿ ನಿರ್ಮಿಸಲು ಜಾಗವನ್ನು ಕಾಯ್ದಿರಿಸಲಾಗಿದೆ. ಆದರೆ ಕುಂಬಾರ ಜನಾಂಗದವರ ಗಮನಕ್ಕೆ ಬಾರದೆ ಕೊಣಸೂರು ಗ್ರಾಮದ ಮೇದರ ಕೇತೇಶ್ವರ ಕ್ಷೇಮಾಭಿವೃದ್ಧಿ ಸಂಘದವರಿಗೆ ಖಾತೆ ಮಾಡಿ ಕೊಡಲಾಗಿದೆ. ಈ ವಿಚಾರವಾಗಿ ಕುಂಬಾರ ಸಂಘದವರು ಜಿಪಂ ಸಿಇಒ ಅವರಿಗೆ ಮೇಲ್ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.


ಪಿಡಿಒ ದೇವರಾಜೇಗೌಡ ಮಾತನಾಡಿ, ಜಾಗದ ವಿಚಾರವಾಗಿ ಗ್ರಾಮ ಪಂಚಾಯಿತಿ ಸಭೆಯಲ್ಲಿ ಚರ್ಚೆ ಮಾಡಿ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಸರ್ಕಾರ ಹಾಗೂ ಸಿಇಒ ಯಾವ ಕ್ರಮ ಕೈಗೊಳ್ಳುತ್ತಾರೋ ಅದಕ್ಕೆ ನಾವು ಬದ್ಧ ಎಂದು ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net