

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಪಂಜಿನ ಮೆರವಣಿಗೆ, ರಸ್ತೆಯ ಮೇಲೆ ಹೂವುಗಳನ್ನು ಚೆಲ್ಲುವಿಕೆ, ಎಲ್ಲರೂ ಜೋರಾಗಿ ಬಾಯಿ ಬಡಿದುಕೊಳ್ಳುವಿಕೆ ಮತ್ತು ರ‌್ಯಾಲಿ ಸೇರಿ ನಾನಾ ರೀತಿಯಲ್ಲಿ ಪ್ರತಿಭಟಿಸುವ ಮೂಲಕ ಹೋರಾಟಗಾರರು ಕೇಂದ್ರ ಸರ್ಕಾರದ ಕೃಷಿ ನೂತನ ಕಾಯ್ದೆಗಳನ್ನು ವಿರೋಧಿಸಿದರು ಹಾಗೂ ಬೆಲೆ ಏರಿಕೆಯನ್ನು ಖಂಡಿಸಿದರು.
ಸಂಯುಕ್ತ ಹೋರಾಟ ಕರ್ನಾಟಕ ಸಂಘದ ನೇತೃತ್ವದಲ್ಲಿ ರಾಜ್ಯ ರೈತಸಂಘ ಮತ್ತು ಹಸಿರುಸೇನೆ, ಪ್ರಾಂತ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ್, ಪುಟ್ಟಣ್ಣಯ್ಯ, ನಂಜುಂಡಯ್ಯ ಬಣ), ಕರವೇ ಯುವಸೇನೆ, ಕನ್ನಡಸೇನೆ, ಕಿಸಾನ್ ಕಾಂಗ್ರೆಸ್, ದಸಂಸ, ಸೇರಿ ವಿವಿಧ ಸಂಘಟನೆಗಳು ಭಾರತ್ ಬಂದ್‌ಗೆ ಬೆಂಬಲ ನೀಡಿದವು.
ಬಂದ್ ನಡುವೆಯೂ ಅಂಗಡಿ, ಹೋಟೆಲ್, ಸಿನಿಮಾ ಮಂದಿರ, ಬ್ಯಾಂಕ್‌ಗಳು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಶಾಲಾ ಕಾಲೇಜುಗಳು, ಸಂತೆ ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಾರಿಗೆ ಮತ್ತು ಖಾಸಗಿ ಬಸ್‌ಗಳು ಹಾಗೂ ಇನ್ನಿನತರ ವಾಹನಗಳ ಸಂಚಾರ ಸಾಮಾನ್ಯವಾಗಿತ್ತಲ್ಲದೆ ರಸ್ತೆಗಳಲ್ಲಿ ಜನರ ಓಡಾಟವೂ ಕಂಡುಬಂದಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಬಾಗಿಲು ಮುಚ್ಚಲು ವಾಗ್ವಾದ: ಬೆಳಗ್ಗೆ ಬೈಕ್ ರ‌್ಯಾಲಿ ನಡೆದ ಸಂಘಟನೆಗಳ ಕಾರ್ಯಕರ್ತರು, ವಹಿವಾಟು ಸ್ಥಗಿತಗೊಳಿಸಲು ಮಾಲೀಕರನ್ನು ಮನವಿ ಮಾಡಿದರು. ಇದರ ನಡುವೆ ಹಲವೆಡೆ ಅಂಗಡಿಗಳು, ಹೋಟೆಲ್‌ಗಳು ಬಾಗಿಲು ತೆಗೆದಿದ್ದರಿಂದ ಅಸಮಾಧಾನಗೊಂಡ ಪ್ರತಿಭಟನಾಕಾರರು ಮತ್ತೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬಾಗಿಲು ಮುಚ್ಚಲು ಒತ್ತಡ ಹೇರಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಕೃಷಿಯ ಕಾಯ್ದೆಗಳಿಂದ ರೈತರು ಬೀದಿಗೆ ಬಂದಿದ್ದಾರೆ. ಹೋರಾಟಕ್ಕೆ ಬೆಂಬಲ ನೀಡಲು ಕೋರಿದರೂ ಸಂಬಂಧವಿಲ್ಲದಂತೆ ವರ್ತಿಸಲಾಗುತ್ತಿದೆ ಎಂದು ಎಂ.ಜಿ.ರಸ್ತೆಯಲ್ಲಿನ ಎಲೆಕ್ಟ್ರಾನಿಕ್ಸ್, ದಿನಸಿ ಹಾಗೂ ಶೂ ಅಂಗಡಿಯ ಮಾಲೀಕರನ್ನು ಜಿಲ್ಲಾ ರೈತಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ್ ಸೇರಿ ಹಲವರು ತರಾಟಗೆ ತೆಗೆದುಕೊಂಡರು.
ರೈತರನ್ನು ಬೀದಿಗೆ ತಳ್ಳುವ ಕೇಂದ್ರದ ನೀತಿಗಳು: ಮಾರಕ ನೀತಿಗಳ ಜಾರಿ ಮೂಲಕ ಕೇಂದ್ರ ಸರ್ಕಾರ ರೈತರನ್ನು ಬೀದಿಗೆ ತಳ್ಳುತ್ತಿರುವುದಲ್ಲದೆ ಕೃಷಿಯನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಕಿಡಿಕಾರಿದರು. ನಗರದ ಶಿಡ್ಲಘಟ್ಟ ವೃತ್ತದಲ್ಲಿ ಹೂವುಗಳನ್ನು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ಕೃಷಿ ಉತ್ಪನ್ನಗಳ ಬೆಲೆ ದ್ವಿಗುಣಗೊಳಿಸುವ ಭರವಸೆ ನೀಡಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಬಂದಿತ್ತು. ಆಡಳಿತದಾವಧಿಯ ಕಳೆದ 7 ವರ್ಷಗಳಿಂದಲೂ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಶ್ರೀಮಂತ ಉದ್ಯಮಿಗಳ ಅಧೀನದಲ್ಲಿದೆ. ಸಾಮಾನ್ಯ ರೈತರ ಅಳಲನ್ನು ಆಲಿಸುತ್ತಿಲ್ಲ. ಇದಕ್ಕೆ ಪ್ರತಿಯಾಗಿ ಅಧಿಕಾರ ಕಳೆದುಕೊಳ್ಳುವುದು ಖಚಿತ ಎಂದು ಜಿಲ್ಲಾ ರೈತ ಸಂಘದ (ರೈತ ಮಕ್ಕಳ ಬಣ) ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಎಚ್ಚರಿಸಿದರು. ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಜಿಲ್ಲಾ ಕರವೇ ಯುವಸೇನೆ ಅಧ್ಯಕ್ಷ ಶ್ರೀರಾಮೇಗೌಡ, ಜಿಲ್ಲಾ ಕನ್ನಡಸೇನೆ ಅಧ್ಯಕ್ಷ ವಿ.ರವಿಕುಮಾರ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ ಮತ್ತಿತರರು ಇದ್ದರು.