ಭಾರತದಲ್ಲಿ ಮೀಸಲಾತಿ ಅಗತ್ಯ: ಕೆ.ಎನ್.ಲಿಂಗಪ್ಪ

devaraj arasu birthday
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಭಾವಚಿತ್ರಕ್ಕೆ ಹಿಂದುಳಿದ ಜನ ಜಾಗೃತಿ ವೇದಿಕೆ ಮುಖಂಡ ರಾಜ್‌ಕುಮಾರ್ ಪುಷ್ಪನಮನ ಸಲ್ಲಿಸಿದರು. ತೀ.ನ.ಶ್ರೀನಿವಾಸ್, ಕೆ.ಎನ್.ಲಿಂಗಪ್ಪ, ಪ್ರೊ.ಎಚ್.ರಾಚಪ್ಪ, ಬಿ.ಗೋಪಾಲ್, ಜಿ.ಬಿ.ವಿನಯ ಕುಮಾರ್, ಡಾ.ಜಿ.ಡಿ.ನಾರಾಯಣಪ್ಪ, ಮಹಮದ್ ಸನಾವುಲ್ಲಾ ಇದ್ದರು.
Published on

ಶಿವಮೊಗ್ಗ: ಭಾರತದಲ್ಲಿ ಜಾತಿ ವ್ಯವಸ್ಥೆ ಪರಿಕಲ್ಪನೆ ಪ್ರಬಲವಾಗುತ್ತಿರುವ ಕಾರಣ ಮೀಸಲಾತಿ ಅಗತ್ಯ. ಉತ್ಕೃಷ್ಟರಿಗೆ ಮೀಸಲಾತಿ ಬೇಡ. ಆದರೆ ನಿಕೃಷ್ಟರಿಗೆ ಎಲ್ಲವೂ ಬೇಕಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಹಾಗೂ ಕೆಎಎಸ್ ನಿವೃತ್ತ ಅಧಿಕಾರಿ ಕೆ.ಎನ್.ಲಿಂಗಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಹಿಂದುಳಿದ ಜನ ಜಾಗೃತಿ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಹಾಗೂ ವಿಚಾರ ಸಂಕಿರಣದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಉಪನ್ಯಾಸ ನೀಡಿದರು.
ಮೀಸಲಾತಿ ವ್ಯವಸ್ಥೆ ನಮ್ಮ ದೇಶದಲ್ಲಿ ಮಾತ್ರ ಇಲ್ಲ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಬೇರೆ ಬೇರೆ ಸ್ವರೂಪದಲ್ಲಿದೆ. ಶೋಷಣೆಗೆ ಒಳಗಾದವರನ್ನು ಮೇಲೆತ್ತುವ ಕೆಲಸ ಆಗುತ್ತಿದೆ. ಬ್ರೆಜಿಲ್, ದಕ್ಷಿಣಆಫ್ರಿಕಾ, ಅಮೆರಿಕಾ, ಮಲೇಷಿಯಾ, ಶ್ರೀಲಂಕಾ, ಬಾಂಗ್ಲಾ ಸೇರಿ ಹಲವು ದೇಶಗಳಲ್ಲಿ ಮೀಸಲಾತಿ ವ್ಯವಸ್ಥೆ ಇದೆ. ಆದರೆ ಸ್ವರೂಪ ಮಾತ್ರ ವಿಭಿನ್ನ. ಭಾರತದ ಸಮಾಜಿಕ ವ್ಯವಸ್ಥೆಯಲ್ಲಿ ಜಾತಿ ಪದ್ಧತಿ ಇರುವುದರಿಂದ ಕೆಳಸ್ತರದ ಜಾತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇನ್ನೂ ಸಾಧ್ಯವಾಗಿಲ್ಲ. ಕೆಳಸ್ತರದ ಜಾತಿಗಳನ್ನು ಮೇಸ್ತರಕ್ಕೆ ತರಲು ಮೀಸಲಾತಿ ಬೇಕಿದೆ ಎಂದರು.
ಹಿಂದುಳಿದ ವರ್ಗದವರು ದೇವರಾಜ ಅರಸು ಅವರ ಸ್ಮರಣೆ ಮಾಡಿಕೊಂಡಿರಬೇಕೇ ಹೊರತು ಅವರ ಋಣ ತೀರಿಸಲು ಸಾಧ್ಯವಿಲ್ಲ. ಅವರು ಸಿಎಂ ಆಗಿದ್ದಾಗ ಮೀಸಲಾತಿ ಜಾರಿಗೊಳಿಸದಿದ್ದರೆ ಇಂದಿಗೂ ಹಿಂದುಳಿದವರು ಹಾಗೂ ದಲಿತ ಸಮುದಾಯಗಳು ಶೋಚನೀಯ ಸ್ಥಿತಿಯಲ್ಲಿಯೇ ಇರಬೇಕಿತ್ತು ಎಂದರು.
ಹಿಂದುಳಿದ ಜನಜಾಗೃತಿ ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆ ಗೌರವಾಧ್ಯಕ್ಷ ಪ್ರೊ.ಎಚ್.ರಾಚಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜಕುಮಾರ್, ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಬಿ.ಗೋಪಾಲ್, ದಾವಣಗೆರೆಯ ಇನ್ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆ ಮುಖ್ಯಸ್ಥ ಜಿ.ಬಿ.ವಿನಯ ಕುಮಾರ್, ಡಾ.ಜಿ.ಡಿ.ನಾರಾಯಣಪ್ಪ, ಮಾಜಿ ಉಪಮೇಯರ್ ಮಹಮ್ಮದ್ ಸನಾವುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net