

ವಾಷಿಂಗ್ಟನ್: ಪ್ರತಿಯೊಂದು ವಿಷಯದಲ್ಲೂ ಭಾರತದ ವಿರುದ್ಧ ಚೀನಾ ಪ್ರಚೋದನಕಾರಿ ನಡೆಯನ್ನು ಅನುಸರಿಸುತ್ತಿದೆ ಎಂದು ಅಮೆರಿಕದ ಸಂಸದ, ದಕ್ಷಿಣ ಮತ್ತು ಕೇಂದ್ರ ಭಾರತ ಕುರಿತ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಹೇಳಿದ್ದಾರೆ.
ಸೆನೆಟ್ನ (ಸಂಸತ್ನ ಮೇಲ್ಮನೆ) ಉಪಸಮಿತಿಯಲ್ಲಿ ದಕ್ಷಿಣ ಮತ್ತು ಕೇಂದ್ರ ಏಷ್ಯಾ ಹಾಗೂ ಭಯೋತ್ಪಾದಕತೆ ಕುರಿತು ಮಾತನಾಡಿದ ಅವರು, ಎಲ್ಲ ವಿಧದಲ್ಲೂ ಭಾರತದ ವಿರುದ್ಧ ನಡೆಯನ್ನು ಚೀನಾ ಅನುಸರಿಸುತ್ತಿದೆ. ಪೂರ್ವ ಲಡಾಖ್ ಗಡಿ ಘರ್ಷಣೆ ಬಳಿಕ ಭಾರತ-ಚೀನಾ ಸಂಬಂಧ ಸರಿಯಿಲ್ಲ. ಅಮೆರಿಕದ ವಿರುದ್ಧವೂ ಚೀನಾ ಕತ್ತಿಮಸೆಯುತ್ತದೆ ಎಂದಿದ್ದಾರೆ.
ಚೀನಾ ಇತ್ತೀಚೆಗೆ ಬಿಡುಗಡೆ ಮಾಡಿರುವ ನಕ್ಷೆಯಲ್ಲಿ ಭಾರತದ ಅನೇಕ ಭಾಗಗಳನ್ನು ತನ್ನದೆಂದು ಸೇರಿಸಿಕೊಂಡುಬಿಟ್ಟಿದೆ. ಅರುಣಾಚಲ ಪ್ರದೇಶದಲ್ಲಿ ಹೆಚ್ಚು ಭಾಗಗಳನ್ನು ತನ್ನದೆಂದು ಹೇಳಿಕೊಂಡಿದೆ. ಅಲ್ಲಿನ ಹಳ್ಳಿಗಳಿಗೆ ಚೀನಾದ ಹೆಸರನ್ನು ನಾಮಕರಣ ಮಾಡಿದ ಎಂದು ಡೊನಾಲ್ಡ್ ಹೇಳಿದ್ದಾರೆ. ಚೀನಾ ಪ್ರಚೋದನೆಯನ್ನು ತಡೆಯುವ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸವನ್ನು ಅಮೆರಿಕ ಮಾಡಬೇಕು. ಇದಕ್ಕಾಗಿ ದೃಢವಾದ ನೌಕಾ ಸಹಕಾರ, ಬೇಹುಗಾರಿಕಾ ಮಾಹಿತಿ ಹಂಚಿಕೆ, ಸೈಬರ್ಸ್ಪೇಸ್ ಎಂಬ ಅಧುನಿಕ ಸಂವಹನವನ್ನು ಹಂಚಿಕೊಳ್ಳಬೇಕು ಎಂದಿದ್ದಾರೆ.