ಭಾರತದ ಮೇಲೆ ಪದೇ ಪದೆ ಉಗ್ರರ ದಾಳಿ

9
Published on

ಪ್ರಧಾನಿ ಮೋದಿ ಅವರ ತಾತ್ಸಾರ ಹಾಗೂ ನಿರ್ಲಕ್ಷೃ ಧೋರಣೆಯಿಂದ ಭಾರತದ ಮೇಲೆ ಪದೇ ಪದೆ ಉಗ್ರರ ದಾಳಿ ನಡೆಯುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಕಿಡಿಕಾರಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಭಯೋತ್ಪಾದನಾ ಖಂಡನಾ ಸಭೆ ಮತ್ತು ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ದುರ್ಬಲರು. ಅಷ್ಟೇ ಅಲ್ಲದೆ ಇವರ ನಿರ್ಲಕ್ಷೃದಿಂದ ಭಾರತದ ಮೇಲೆ ನಿರಂತರ ದಾಳಿಯಾಗುತ್ತಿದೆ ಎಂದು ಆರೋಪಿಸಿದರು.

2014ರಿಂದ ಮೂರು ಸಾವಿರಕ್ಕೂ ಹೆಚ್ಚು ಭಯೋತ್ಪಾದಕರ ದಾಳಿಗಳು ನಡೆದಿವೆ. ಇದರಲ್ಲಿ ಸುಮಾರು 400ಕ್ಕೂ ಹೆಚ್ಚು ನಾಗರಿಕರು ಹತರಾಗಿದ್ದಾರೆ. 600ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗದ್ದಾರೆ. 2016ರಲ್ಲಿ ಉರಿ ದಾಳಿಯಲ್ಲಿ ಸೈನಿಕರರು ಮೃತರಾದರು. ಇದಕ್ಕೆ ಪ್ರಧಾನಿ ಮೋದಿ ಉತ್ತರಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ಪುಲ್ವಾಮಾ ದಾಳಿಯಲ್ಲೂ 40 ಯೋಧರು ಹುತಾತ್ಮರಾದರೂ ಅದರ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೈನಿಕರು ಕೊಂದು ಹಾಕಿದ್ದಾರೆ. ಆದರೆ ಯಾವುದೇ ಮಾಹಿತಿ ಇಲ್ಲದೆ 1500 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ದೇಶದ ಶತ್ರುಗಳು ಯಾರೆ ಇದ್ದರೂ ಅಂತಹವರ ವಿರುದ್ಧ ಹೋರಾಡಿ ಭಯೋತ್ಪಾದನೆಯನ್ನು ಕಿತ್ತು ಹಾಕುವ ಕೆಲಸವನ್ನು ಕೇಂದ್ರ ಹಾಗೂ ಎಲ್ಲ ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದೆ. ಹುಬ್ಬಳ್ಳಿಯಲ್ಲಿ ಗಲಭೆಯಾದರೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುತ್ತಾರೆ. ಬೆಂಗಳೂರಿನಲ್ಲಿ ಗಲಭೆಯಾದರೆ ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳುತ್ತಾರೆ. ಆದರೆ ಈಗ ನಡೆದಿರುವ ಘಟನೆಗೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ವಿಶ್ವ ಮೈತ್ರಿ ಬೌದ್ಧ ವಿಹಾರದ ಡಾ.ಕಲ್ಯಾಣ ಬಂತೇಜಿ ಭಯೋತ್ಪಾದನಾ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net