

ಬಾಳೆಹೊನ್ನೂರು: ಭಾರತದ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕಿದ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಐಟಿಐ ಕಾಲೇಜು ಪ್ರಾಚಾರ್ಯ ಎಚ್.ಆರ್.ಆನಂದ್ ಹೇಳಿದರು.
ರೇಣುಕ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಯುವಕರು ಉತ್ತಮ ಸಾಧನೆ ಮಾಡಲು ಅಂಬೇಡ್ಕರ್ ಜೀವನ ದಾರಿದೀಪವಾಗಿದೆ. ಬಾಬಾ ಸಾಹೇಬ್ ಕಡು ಬಡತನದಲ್ಲಿ ಹುಟ್ಟಿ, ಬಾಲ್ಯದಲ್ಲಿ ಸಾಕಷ್ಟು ಕಷ್ಟ, ನೋವನ್ನು ಅನುಭವಿಸಿದರೂ ಎದೆಗುಂದದೆ ಹೋರಾಟ ನಡೆಸಿ, ತನ್ನ ಅತ್ಯುತ್ತಮ ಪ್ರತಿಭೆಯಿಂದ ಅಮೆರಿಕ ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದು ಮಹಾ ಮೇಧಾವಿಯಾದರು ಎಂದು ಶ್ಲಾಘಿಸಿದರು.
ಅಪ್ರತಿಮ ಪ್ರತಿಭೆಯಿಂದ ಭಾರತದ ಸಂವಿಧಾನ ರಚಿಸುವುದರ ಜತೆಗೆ ಸ್ವತಂತ್ರ ಭಾರತದ ಪ್ರಥಮ ಕಾನೂನು ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ವ್ಯಾಸಂಗ ಮಾಡಿ ಉತ್ತಮ ಸ್ಥಾನ ಪಡೆಯುವಂತಾಗಬೇಕು ಎಂದು ತಿಳಿಸಿದರು.
ಅಂಬೇಡ್ಕರ್ ತಮ್ಮ ಮೂಕ ನಾಯಕ ಮತ್ತು ಬಹಿಷ್ಕೃತ ಭಾರತ ಎಂಬ ಪತ್ರಿಕೆಗಳ ಮೂಲಕ ಭಾರತೀಯರಲ್ಲಿ ಜಾಗೃತಿ ಮೂಡಿಸಿ, ಅಸ್ಪಶ್ಯತೆಯನ್ನು ದೂರ ಮಾಡಿದರು. ಅವರ ಭವ್ಯ ಭಾರತದ ಕನಸು ಇತ್ತೀಚಿನ ವರ್ಷಗಳಲ್ಲಿ ಸಾಕಾರಗೊಳ್ಳುತ್ತಿದೆ. ಅವರ ಉದಾತ್ತ ಗುಣಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದರು.
ಶಿಕ್ಷಕ ವಿ.ವಿ.ಚಂದ್ರಶೇಖರ್ ಮಾತನಾಡಿ, ಯುವಕರು ಸಂವಿಧಾನದ ಬಗ್ಗೆ ಆಸಕ್ತಿವಹಿಸಿ ಅಧ್ಯಯನ ನಡೆಸಬೇಕು. ಅಂಬೇಡ್ಕರ್ ರಚಿಸಿದ ಸಂವಿಧಾನ ಭಾರತೀಯರ ಪ್ರಮುಖ ಗ್ರಂಥವಾಗಿದೆ. ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು ಎಂದು ಹೇಳಿದರು. ಶಿಕ್ಷಕರಾದ ಉಮೇಶ್, ರವಿರಾಜು, ಶ್ರೀನಿವಾಸ್, ಅಶೋಕ್, ಚಂದ್ರಶೇಖರ್, ಮಲ್ಲಿಕಾರ್ಜುನ, ಪ್ರಕಾಶ್ ಇತರರಿದ್ದರು.