

ಬಾಲರಾಮನ ಮೂರ್ತಿಯ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಅದೇ ಭೂಮಿಯಲ್ಲಿ ದಕ್ಷಿಣ ಭಾರತದ ಬುದ್ಧ ಗಯಾ ಸ್ಮಾರಕ ನಿರ್ಮಾಣ ಮಾಡಲು ಪ್ರಗತಿಪರರು ಮುಂದಾಗಿದ್ದಾರೆ.
ಇತ್ತೀಚೆಗೆ ದಕ್ಷಿಣ ಅಯೋಧ್ಯೆ ಮಾಡುತ್ತೇವೆ ಎಂದು ರಾಮಮಂದಿರ ನಿರ್ಮಾಣ ಮಾಡಲು ಹೋಗಿದ್ದವವರಿಗೆ ಪ್ರಗತಿಪರ ಚಿಂತಕರು ಅಡ್ಡಿ ಮಾಡಿ ವಾಪಸ್ ಕಳುಹಿಸಿದ್ದರು. ನಗರದ ಹೊರ ವಲಯದಲ್ಲಿನ ಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮದಲ್ಲಿ ಜೂ.11ರಂದು ಬೆಳಗ್ಗೆ 11 ಗಂಟೆಗೆ 2569ನೇ ಬುದ್ಧ ಪೂರ್ಣಿಮೆ ಅಂಗವಾಗಿ ದಕ್ಷಿಣ ಭಾರತದ ಬುದ್ಧ ಗಯಾ ಸ್ಮಾರಕ ನಿರ್ಮಾಣಕ್ಕಾಗಿ ಧಮ್ಮ ಸಂಕಲ್ಪ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸ್ಮಾರಕ ನಿರ್ಮಾಣಕ್ಕಾಗಿ ಶಿಲೆ ಸಿಕ್ಕ ಜಮೀನು ಮಾಲೀಕರು ಹಾಗೂ ಗ್ರಾಮದ ದಲಿತ ಮುಖಂಡರಾದ ಜಯಮ್ಮ ಹಾಗೂ ಅವರ ಕುಟುಂಬದವರು ಭೂಮಿಯನ್ನು ಸ್ವಇಚ್ಛೆಯಿಂದ ದಾನವಾಗಿ ನೀಡುತ್ತಿದ್ದಾರೆ. ಬೌದ್ಧ ಪರಂಪರೆ ಮನುಷ್ಯರು ಒಳಗೊಂಡಂತೆ ಎಲ್ಲ ಜೀವಿಗಳ ಸುಖ, ಶಾಂತಿ, ನೆಮ್ಮದಿ ಬಯಸುತ್ತದೆ. ಇಂತಹ ಮಾನವೀಯತೆ, ಸಮಾನತೆಯ ಆಶಯಗಳ ಬೌದ್ಧ ಧರ್ಮ ಉಳಿಸಿಕೊಳ್ಳಲು ಮೈಸೂರು ದಕ್ಷಿಣ ಭಾಗದಲ್ಲಿ ಬುದ್ಧ ಗಯಾ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಉತ್ತರ ಭಾರತದಲ್ಲಿರುವ ಬುದ್ಧ ಗಯಾವನ್ನು ಎಲ್ಲ ಮನುವಾದಿಗಳು ಆಕ್ರಮಿಸಿಕೊಂಡಿದ್ದಾರೆ. ಹೀಗಾಗಿ, ದಕ್ಷಿಣ ಭಾರತದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ, ಆ ಭಾಗದಲ್ಲಿ ದಕ್ಷಿಣ ಆಯೋಧ್ಯೆ ನಿರ್ಮಾಣಕ್ಕೆ ಎಲ್ಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಜಮೀನು ನೀಡುತ್ತಿದ್ದಾರೆಂದು ಹೇಳಲಾಗಿದ್ದ ಕುಟುಂಬವನ್ನು ಕತ್ತಲೆಯಲ್ಲಿಟ್ಟು ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಹೇಳಲಾಗುತ್ತಿತ್ತು. ಹೀಗಾಗಿ, ಇದನ್ನು ವಿರೋಧಿಸಲಾಯಿತು ಎಂದರು.
ದಲಿತ ಮುಖಂಡರಾದ ಚೋರನಹಳ್ಳಿ ಶಿವಣ್ಣ, ತಾಪಂ ಮಾಜಿ ಸದಸ್ಯ ಸುರೇಶ್‌ಕುಮಾರ್, ಹರಿಹರ ಆನಂದಸ್ವಾಮಿ ಮೊದಲಾದವರು ಇದ್ದರು.