ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯಲ್ಲಿ ಭಾನುವಾರವೂ ಶೀತಗಾಳಿ ಮತ್ತು ತುಂತುರು ಮಳೆ ಮುಂದುವರೆದಿತ್ತು. ಬೆಳ್ಳಿಗ್ಗಿನಿಂದಲೇ ಶೀತಗಾಳಿಯಿಂದ ತಲ್ಲಣಗೊಂಡಿದ್ದ ಜನತೆ ಮನೆಗಳಿಂದ ಹೊರ ಬರಲು ಸಾಧ್ಯವಾಗಲಿಲ್ಲ.
ಕೆಲವು ತಾಲ್ಲೂಕುಗಳಲ್ಲಿ ಬೆಳ್ಳಿಗ್ಗಿನಿಂದಲೂ ತುಂತುರು ಮಳೆ ಮುಂದುವರೆದಿತ್ತು. ಜಾನುವಾರುಗಳಿಗೆ ಮೇವು ಇಲ್ಲದೆ ಮನೆಗಳಲ್ಲಿಯೇ ಇರುವಂತಾಗಿತ್ತು. ಭಾನುವಾರ ರಜೆ ಇದ್ದ ಕಾರಣ ಶಾಲಾ ಮಕ್ಕಳು ಮನೆಯಿಂದ ಹೊರ ಬರಲಿಲ್ಲ. ಸೋಮವಾರವೂ ಹೀಗೆ ಮುಂದುವರೆದರೆ ಶಾಲಾ ಮಕ್ಕಳು ಶಾಲೆಗಳಿಗೆ ತೆರಳಲು ಕಷ್ಟದ ಪರಿಸ್ಥಿತಿ ಉಂಟಾಗುತ್ತದೆ.
ಮಳೆಯ ಕಾರಣ ಗುಣಮಟ್ಟದ ತರಕಾರಿಗಳು ಸಿಗದೆ ಸಾರ್ವಜನಿಕರು ಪರದಾಡುವಂತಾಯಿತು. ಕಾರ್ತಿಕ ಸೋಮವಾರ ಮುಗಿದಿದ್ದ ಕಾರಣ ಮಾಂಸದ ಅಂಗಡಿಗಳಲ್ಲಿ ಭಾನುವಾರ ಭರ್ಜರಿ ವ್ಯಾಪಾರ ನಡೆಯಿತು. ತಳ್ಳುವ ಗಾಡಿಗಳ ವ್ಯಾಪಾರಸ್ಥರು ಶೀತಗಾಳಿಗೆ ಭಯಬಿದ್ದು, ರಸ್ತೆಗೆ ಬರಲಿಲ್ಲ. ಬಂದವರಿಗೆ ವ್ಯಾಪಾರ ಇಲ್ಲದೆ ಅಂಗಗಳು ಬಿಕೋ ಎನ್ನುತ್ತಿದ್ದವು.
ಪ್ರತಿದಿನ ಹೂವಿನ ಮಾರುಕಟ್ಟೆಯಲ್ಲಿ ಗಿಜುಗುಟ್ಟುತ್ತಿದ್ದ ಜನಸಂದಣಿ ಭಾನುವಾರ ಮಾರುಕಟ್ಟೆ ಬಿಕೋ ಎನ್ನುತ್ತಿದ್ದು, ಹೂವು ಖರೀದಿಸುವವರೇ ಇರಲಿಲ್ಲ. ಕಾರ್ತಿಕ ಮಾಸದ ಕಡೇ ಸೋಮವಾರವಾದ ಕಾರಣ ಭಾನುವಾರವೂ ಕೆಲವರು ಕಿರು ದೀಪಾವಳಿ ಹಬ್ಬವನ್ನು ಆಚರಣೆಯನ್ನು ಮಾಡಿದರು. ಇನ್ನು ಕೆಲವರು ಇದೇ ಅಮಾವಾಸ್ಯೆ ಕಡೆ ಎಂದು ಮಾಂಸದ ಅಂಗಡಿಗಳಿಗೆ ಮುಗಿ ಬಿದ್ದು, ಮಾಂಸ ಖರೀದಿಯಲ್ಲಿ ಜೋರಾಗಿದ್ದರು.