ಭಯೋತ್ಪಾದನೆ ಮಟ್ಟ ಹಾಕಿದ ಭಾರತೀಯ ಯೋಧರಿಗೆ ಎಲ್ಲೆಡೆ ಪ್ರಶಂಸೆ

PM Modi
Published on

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿ ನಮ್ಮ ಹೆಣ್ಣು ಮಕ್ಕಳ ‘ಸಿಂಧೂರ’ ಅಳಿಸಿ ಹಾಕಿದ ಉಗ್ರಗಾಮಿಗಳಿಗೆ ನಮ್ಮ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ, ವಿಶ್ವದಲ್ಲಿ ಸಂಪೂರ್ಣವಾಗಿ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕು ಎಂಬ ಸಂದೇಶ ಸಾರಿದ್ದಾರೆ. ಆಪರೇಷನ್ ಸಿಂಧೂರ ಹಾಗೂ ತದನಂತರದ ಸೈನಿಕ ಕಾರ್ಯಾಚರಣೆಯಲ್ಲಿ ಭಾರತದ ಸೇನಾಬಲದ ಹಿರಿಮೆಗೆ ವಿಶ್ವವೇ ಸಾಕ್ಷಿಯಾಗಿದೆ. ನಮ್ಮ ಸೈನ್ಯದ ಸಾಹಸಕ್ಕೆ ಎಲ್ಲೆಡೆ ಪ್ರಶಂಸೆಯೂ ದೊರೆತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಯೋತ್ಪಾದನೆ ಎದುರು ಶಾಂತಿ ಸಾಧ್ಯವಿಲ್ಲ ಎಂದಿದ್ದಾರೆ. ಉಗ್ರವಾದದ ಪರ ಇರುವ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕು. ಸಿಂಧೂರ ಎಂದರೆ ಮಹಿಳೆಯರ ಹಣೆಯ ಮೇಲೆ ಶೋಭಿಸುವ ಕುಂಕುಮ. ಆ ಸಿಂಧೂರವನ್ನು ಅಳಿಸಿದ ಕಾಶ್ಮೀರದ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ನಡೆಸಿ ಜಗತ್ತಿಗೆ ವಿಶೇಷ ಸಂದೇಶ ನೀಡಿದೆ. ಪಾಕಿಸ್ತಾನಕ್ಕೇ ನುಗ್ಗಿ ಉಗ್ರ ನೆಲೆಯನ್ನು ನಮ್ಮ ಸೈನಿಕರು ಹೊಸಕಿ ಹಾಕಿದ್ದಾರೆ. ಅದ್ಭುತ ಶೌರ್ಯ ತೋರಿದ ಭಾರತೀಯ ಸೇನೆಗೆ ದೇಶದ ಎಲ್ಲರೂ ಶ್ಲಾಘಿಸಿದರು. ಅದೇ ರೀತಿ ಆಪರೇಷನ್ ಸಿಂಧೂರದ ಯಶಸನ್ನು ಪ್ರಧಾನಿ ನರೇಂದ್ರ ಮೋದಿ ದೇಶದ ನಾರಿಶಕ್ತಿಗೆ ಸಮರ್ಪಣೆ ಮಾಡಿದರು. ಈ ಬಗ್ಗೆ ಮೈಸೂರಿನ ನಾರಿ ಶಕ್ತಿ ನೀಡಿದ ಅಭಿಪ್ರಾಯ ಇಲ್ಲಿದೆ.

ಹೆಸರಿನಲ್ಲೇ ದೊಡ್ಡ ಶಕ್ತಿ - ಭಕ್ತಿ ಇದೆ

‘ಸಿಂಧೂರ’ ಹೆಸರಿನಲ್ಲೇ ದೊಡ್ಡ ಶಕ್ತಿ ಮತ್ತು ಭಕ್ತಿ ಇದೆ. ಜತೆಗೆ ಮೋದಿ ಅವರ ಯುಕ್ತಿಯೂ ಇದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ನಮ್ಮ ಸೈನಿಕರು ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಮುನ್ನುಗ್ಗಿ ಹೋರಾಟ ಮಾಡುವ ಮೂಲಕ ಅಪರೇಷನ್ ಸಿಂಧೂರವನ್ನು ಯಶಸ್ವಿಗೊಳಿಸಿದ್ದಾರೆ. ಇದಕ್ಕೆ ಕಾರಣರಾದ ನಮ್ಮ ವೀರ ಯೋಧರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಾಕಿಸ್ತಾನದ ಉಗ್ರರ ಹುಟ್ಟಡಗಿಸಿ ಸದೆ ಬಡಿಯುವಾಗ ವೀರಮರಣ ಅಪ್ಪಿದ ಸಾಹಸಿ ಯೋಧರಿಗೆ ನಮ್ಮ ನಮನಗಳು.

ಸುನಂದಾ ಪಾಲನೇತ್ರಾ

ಮಾಜಿ ಮೇಯರ್

ತಕ್ಕ ಉತ್ತರ ನೀಡಿದ್ದಾರೆ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ನರಮೇಧವನ್ನು ಎಲ್ಲರೂ ಖಂಡಿಸಬೇಕು. ಅದೊಂದು ಅಮಾನುಷ ಹಾಗೂ ಕ್ರೂರ ದಾಳಿಯಾಗಿದೆ. ಮಾನವ ಹಕ್ಕುಗಳ ಮೇಲೆ ನಡೆದ ದಾಳಿಯಲ್ಲಿ ಧರ್ಮವನ್ನೂ ಕೇಳಿ, ಪತ್ನಿ ಎದುರೇ ನೇರ ಗುಂಡಿಕ್ಕಿ ಕೊಂದು ಅವರ ಸಿಂಧೂರ ಅಳಿಸಿರುವುದು ರಾಕ್ಷಸ ಕೃತ್ಯಕ್ಕೂ ಮಿಗಿಲಾಗಿದೆ. ಅಂತಹ ಕ್ರೂರಿಗಳ ವಿರುದ್ಧ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಉಗ್ರಗಾಮಿಗಳನ್ನು ಬೇರು ಸಮೇತ ಕಿತ್ತು ಹಾಕಬೇಕು. ಉಗ್ರಗಾಮಿಗಳನ್ನು ಬೆಳೆಸುತ್ತಿರುವ ಪಾಕಿಸ್ತಾನಕ್ಕೆ ನಮ್ಮ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ.

ಅನಿತಾ

ಭರತನಾಟ್ಯ ಕಲಾವಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net